janadhvani

Kannada Online News Paper

ಶ್ರೀ ಲಂಕಾ ಬಾಂಬ್ ಸ್ಫೋಟ: 300 ದಾಟಿದ ಸಾವಿನ ಸಂಖ್ಯೆ -ಐದು ಭಾರತೀಯರು ಬಲಿ

ಕೊಲಂಬೊ: ಈಸ್ಟರ್ ದಿನದಂದು ಇಲ್ಲಿನ ಚರ್ಚ್‌ ಹಾಗೂ ಹೊಟೇಲ್‌ಗಳಲ್ಲಿ ನಡೆಸಿರುವ ಸ್ಫೋಟಗಳಿಂದಾಗಿ ಐದು ಮಂದಿ ಭಾರತೀಯರು ಸೇರಿದಂತೆ 37 ವಿದೇಶಿಯರು ಸಾವಿಗೀಡಾಗಿದ್ದಾರೆ. ಸ್ಫೋಟದಲ್ಲಿ ಬಲಿಯಾದವರ ಒಟ್ಟು ಸಂಖ್ಯೆ 300 ದಾಟಿದ್ದು , 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಸ್ಫೋಟಗಳಲ್ಲಿ ಮೂವರು ಭಾರತೀಯರು ಮೃತಪಟ್ಟಿರುವುದಾಗಿ ಸುಷ್ಮಾ ಸ್ವರಾಜ್‌ ಭಾನುವಾರ ಟ್ವೀಟ್‌ ಮಾಡಿದ್ದರು. ಇದರೊಂದಿಗೆ ಬೈಕಂಪಾಡಿಯ ಕುಕ್ಕಾಡಿ ಕುಟುಂಬದ ಮಹಿಳೆ ಸೇರಿ ನಾಲ್ವರು ಸಾವಿಗೀಡಾಗಿರುವುದು ತಿಳಿದುಬಂದಿತ್ತು. ಶ್ರೀಲಂಕಾದಲ್ಲಿ ಭಾರತದ ರಾಯಭಾರ ಕಚೇರಿ ಸೋಮವಾರ ಮಾಡಿರುವ ಟ್ವೀಟ್‌, ಇನ್ನೂ ಇಬ್ಬರು ಭಾರತೀಯರು ಮೃತಪಟ್ಟಿರುವುದನ್ನು ಖಚಿತಪಡಿಸಿದೆ.

ಮೃತ ಭಾರತೀಯರು: ಲಕ್ಷ್ಮಿ, ನಾರಾಯಣ್ ಚಂದ್ರಶೇಖರ್, ರಮೇಶ್, ಕೆ.ಜಿ.ಹನುಮಂತರಾಯಪ್ಪ, ಎಂ.ರಂಗಪ್ಪ ಹಾಗೂ ಫಾತಿಮಾ ರಜೀನಾ(ಭಾರತೀಯ ಮೂಲದವರು). ಮೃತ ಹನುಮಂತರಾಯಪ್ಪ ಬೆಂಗಳೂರಿನವರು ಎನ್ನಲಾಗುತ್ತಿದೆ.

ಈಸ್ಟರ್ ಆಚರಣೆಯ ಸಂಭ್ರಮದಲ್ಲಿದ್ದ ಜನರನ್ನು ಸಾವಿಗೆ ದೂಡಿದ ಸ್ಫೋಟಗಳಿಗೆ ಕಾರಣರಾದವರನ್ನು ಪತ್ತೆ ಮಾಡುವ ಪ್ರಯತ್ನವನ್ನು ಶ್ರೀಲಂಕಾ ಪೊಲೀಸರು ಮುಂದುವರಿಸಿದ್ದು, ಈಗಾಗಲೇ 24 ಮಂದಿ ಶಂಕಿತ ಆರೋಪಿಗಳನ್ನು ಬಂಧಿಸಿದ್ದಾರೆ. 

ಭಾನುವಾರ ಮತ್ತು ಸೋಮವಾರ ಕೊಲಂಬೊ ಮತ್ತು ಸುತ್ತಲಿನ ಪ್ರದೇಶದಲ್ಲಿ ಸ್ಫೋಟಕ್ಕೆ ಸಂಬಂಧಿಸಿದಂತೆ 24 ಜನರನ್ನು ಶ್ರೀಲಂಕಾ ಪೊಲೀಸರು ಬಂಧಿಸಿರುವುದಾಗಿ ಎಎಫ್‌ಪಿ ವರದಿ ಮಾಡಿದೆ. 

ವಿಮಾನ ನಿಲ್ದಾಣದ ಸಮೀಪವೇ ಇತ್ತು ಸ್ಫೋಟಕ!

ಕೊಲಂಬೊದ ವಿಮಾನ ನಿಲ್ದಾಣದ ಸಮೀಪದಲ್ಲಿ ಪತ್ತೆಯಾದ ಸುಧಾರಿತ ಸ್ಫೋಟಕ ಪೈಪ್‌ ಬಾಂಬ್‌ನ್ನು ಶ್ರೀಲಂಕಾ ವಾಯುಪಡೆ ತಂಡ ನಿಷ್ಕ್ರಿಯಗೊಳಿಸಿದೆ. 

ವಿಮಾನ ನಿಲ್ದಾಣದ ಮುಖ್ಯ ಟರ್ಮಿನಲ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮನೆಯಲ್ಲಿಯೇ ಸಿದ್ಧಪಡಿಸಿರುವ ಪೈಪ್ ಬಾಂಬ್‌ ಭಾನುವಾರ ರಾತ್ರಿ ಪತ್ತೆಯಾಗಿರುವುದಾಗಿ ವರದಿಯಾಗಿದೆ. ಪೈಪ್‌ನಲ್ಲಿ ಸ್ಫೋಟಕ ತುಂಬಿಸಿ ಸಿಡಿಸುವ ಸುಧಾರಿತ ಸ್ಫೋಟಕವನ್ನು ನಿಷ್ಕ್ರಿಯಗೊಳಿಸಲಾಗಿದೆ. ‘ಅದೊಂದು ಸ್ಥಳೀಯವಾಗಿ ನಿರ್ಮಿಸಿರುವ ಸುಧಾರಿತ ಸ್ಫೋಟಕ’ ಎಂದು ಶ್ರೀಲಂಕಾ ವಾಯುಪಡೆ ವಕ್ತಾರ ಹೇಳಿದ್ದಾರೆ.

ರಸ್ತೆ ಬದಿಯಲ್ಲಿ ಆರು ಅಡಿಗಳಷ್ಟು ಉದ್ದದ ಪೈಪ್‌ ಬಾಂಬ್‌ ಪತ್ತೆಯಾಗಿತ್ತು. ಅದನ್ನು ವಾಯುನೆಲೆಯಲ್ಲಿ ಸುರಕ್ಷಿತವಾಗಿ ನಿಷ್ಕ್ರಿಯಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. 

ವಿಮಾನ ಹಾರಾಟಗಳಲ್ಲಿ ವ್ಯತ್ಯಾಯವಾಗಿದ್ದು, ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಶ್ರೀಲಂಕನ್‌ ಕನಿಷ್ಠ 4 ಗಂಟೆ ಮುಂಚಿತವಾಗಿ ವಿಮಾನ ನಿಲ್ದಾಣಕ್ಕೆ ಬರುವಂತೆ ಪ್ರಯಾಣಿಕರಿಗೆ ಸೂಚಿಸಿದೆ. ಬಂಡಾರನಾಯಕೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅತಿ ಕಠಿಣ ಭದ್ರತಾ ತಪಾಸಣೆ ನಡೆಸಲಾಗುತ್ತಿದೆ. ಹಾಗಾಗಿ ಪ್ರಯಾಣ ಸಮಯಕ್ಕಿಂತ ನಾಲ್ಕು ಗಂಟೆ ಮುಂಚಿತವಾಗಿಯೇ ಚೆಕ್–ಇನ್‌ ಕೌಂಟರ್‌ ತಲುಪುವಂತೆ ತಿಳಿಸಲಾಗಿದೆ. 

ಕೊಲಂಬೊ ಸ್ಫೋಟದಲ್ಲಿ ಜೆಡಿಎಸ್ ಕಾರ್ಯಕರ್ತರು ಸಾವನ್ನಪ್ಪಿರುವ ಕುರಿತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟ್ವಿಟರ್‌ನಲ್ಲಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

error: Content is protected !! Not allowed copy content from janadhvani.com