janadhvani

Kannada Online News Paper

ರಾಹುಲ್ ಗಾಂಧಿ ಪೌರತ್ವ ವಿವಾದ ? ನಾಮಪತ್ರ ಪರಿಶೀಲನೆ ಏಪ್ರಿಲ್ 22ಕ್ಕೆ ಮುಂದೂಡಿಕೆ

ನವದೆಹಲಿ: ಅಮೇಥಿ ಚುನಾವಣಾ ಅಧಿಕಾರಿ ರಾಮ್ ಮನೋಹರ್ ಮಿಶ್ರಾ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ನಾಮಪತ್ರ ಪರಿಶೀಲನೆ ದಿನಾಂಕವನ್ನು ಏಪ್ರಿಲ್ 22ಕ್ಕೆ ಮುಂದೂಡಿದ್ದಾರೆ.

‘ರಾಹುಲ್‌ ಗಾಂಧಿ ಅವರ ದಾಖಲೆಗಳಿಗೆ ಸಂಬಂಧಿಸಿದಂತೆ ಬಂದಿರುವ ದೂರುಗಳಿಗೆ ವಿವರಣೆ ನೀಡಲು ರಾಹುಲ್‌ ಅವರ ಪ್ರತಿನಿಧಿ ರಾಹುಲ್‌ ಕೌಶಿಕ್‌ ಅವರು ಏ.22ರ ಬೆಳಗ್ಗೆ 10.30ರ ವರೆಗೆ ಸಮಯ ಪಡೆದಿದ್ದಾರೆ. ಅಲ್ಲಿಯ ವರೆಗೆ ನಾಮಪತ್ರ ಪರಿಶೀಲನೆ ನಡೆಸದಿರಲು ನಿರ್ಧರಿಸಲಾಗಿದೆ,’ ಎಂದು ರಾಮ್‌ ಚುನಾವಣಾಧಿಕಾರಿ ಮನೋಹರ್‌ ಮಿಶ್ರಾ ಹೇಳಿದ್ದಾರೆ.

ಪಕ್ಷೇತರ ಅಭ್ಯರ್ಥಿ ದ್ರುವ ಲಾಲ್ ಎಂಬವರು ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ದಾಖಲೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದ್ರುವ್ ಲಾಲ್ ಪರ ವಕೀಲ ರವಿ ಪ್ರಕಾಶ್ ಅವರು, ರಾಹುಲ್ ನಾಮಪತ್ರದ ದಾಖಲೆಗಳಲ್ಲಿ ಕೆಲ ಮೂಲಭೂತ ಪ್ರಶ್ನೆಗಳು ಉದ್ಭವವಾಗಿದೆ ಎಂದಿದ್ದಾರೆ.

ರಾಹುಲ್ ಗಾಂಧಿ ಅವರು ಇಂಗ್ಲೆಂಡ್ ವಿಶ್ವವಿದ್ಯಾಲಯದ ಶೈಕ್ಷಣಿಕ ಪ್ರಮಾಣ ಪತ್ರ ಹಾಗೂ ಯುಕೆ ಕಂಪನಿಯ ಪ್ರಮಾಣ ಪತ್ರದಲ್ಲಿ ಬ್ರಿಟಿಷ್ ಪೌರತ್ವವನ್ನು ಪಡೆದಿದ್ದಾರೆ. ಭಾರತೀಯರಲ್ಲದವರಿಗೆ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾವಿಲ್ಲ. ಆದ್ದರಿಂದ ಅವರ ನಾಮಪತ್ರವನ್ನು ಪ್ರಜಾಪ್ರತಿನಿಧಿ ಕಾಯ್ದೆ ಅಡಿ ಪರಿಶೀಲನೆ ನಡೆಸಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ರಾಹುಲ್ ಗಾಂಧಿ ಅವರು ಯಾವ ಆಧಾರದ ಮೇಲೆ ಬ್ರಿಟಿಷ್ ಪ್ರಜೆ ಆಗಿದ್ದಾರೆ? ಈಗ ಭಾರತೀಯ ಪೌರತ್ವ ಹೇಗೆ ಪಡಕೊಂಡಿದ್ದಾರೆ? ಈ ಬಗ್ಗೆ ಸ್ಪಷ್ಟತೆ ಬೇಕು ಎಂಬುವುದು ರವಿ ಪ್ರಕಾಶ್ ಅವರ ಮನವಿ ಆಗಿದೆ. ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಅವರ ದಾಖಲೆಗಳಲ್ಲಿ ರಾಹುಲ್‌ ವಿನ್ಸಿ ಎಂದು ಇದೆ. ಆದರೆ, ರಾಹುಲ್‌ ಗಾಂಧಿ ಹೆಸರಲ್ಲಿ ಯಾವ ದಾಖಲೆಗಳೂ ಲಭ್ಯವಿಲ್ಲ. ರಾಹುಲ್‌ ವಿನ್ಸಿ ಮತ್ತು ರಾಹುಲ್‌ ಗಾಂಧಿ ಇಬ್ಬರೂ ಒಬ್ಬರೇ? ಅಥವಾ ಬೇರೆ ಬೇರೆಯವರೇ ಎಂಬುದು ನಮ್ಮ ಪ್ರಶ್ನೆ. ಹಾಗೇನಾದರೂ ಬೇರೆ ಬೇರೆಯಾಗಿದ್ದಲ್ಲಿ ರಾಹುಲ್‌ ಗಾಂಧಿ ಅವರು ತಮ್ಮ ವಿದ್ಯಾರ್ಹತೆಗೆ ಸಂಬಂಧಿಸಿದ ನೈಜ ದಾಖಲೆಗಳನ್ನು ಸಲ್ಲಿಸಬೇಕು,’ ಎಂಬುದು ನಮ್ಮ ಒತ್ತಾಯವಾಗಿದೆ ಎಂದಿದ್ದಾರೆ ಪ್ರಕಾಶ್‌.

ರಾಹುಲ್ ಗಾಂಧಿ ಅವರ ಸ್ವಕ್ಷೇತ್ರ ಅಮೇಥಿಯಾಗಿದ್ದು, ಮೇ 6 ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಮೇ 23ಕ್ಕೆ ಫಲಿತಾಂಶ ಲಭ್ಯವಾಗಲಿದೆ.

error: Content is protected !! Not allowed copy content from janadhvani.com