ವಯನಾಡ್ (ಕೇರಳ): ದಕ್ಷಿಣ ಭಾರತದ ಜನರ ಧ್ವನಿಯಾಗಲು ನಾನು ವಯನಾಡಿನಿಂದ ಸ್ಪರ್ಧಿಸುತ್ತಿದ್ದೇನೆ, ವಯನಾಡಿಗೆ ಧ್ವನಿಯಾಗುವ ಮೂಲಕ ಇಡೀ ದೇಶಕ್ಕೆ ಧ್ವನಿಯಾಗುತ್ತೇನೆ. ನಾನು ದಕ್ಷಿಣ ಭಾರತದಲ್ಲಿ ಸ್ಪರ್ಧಿಸುವುದಾದರೆ, ವಯನಾಡನಿಂದಲೇ ಸ್ಪರ್ಧಿಸುತ್ತೇನೆ ಎಂದು ತೀರ್ಮಾನಿಸಿದೆ. ಅದಕ್ಕೆ ನಾನು ಇಲ್ಲಿಂದಲೇ ಸ್ಪರ್ಧಿಸಿದ್ದೇನೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ವಯನಾಡಿಗೆ ನಾನು ರಾಜಕಾರಣಿಯಾಗಿ ಬಂದಿಲ್ಲ. ನಿಮ್ಮ ಮನೆ ಮಗನಾಗಿ, ಸೋದರನಾಗಿ, ಸ್ನೇಹಿತನಾಗಿ ಬಂದಿದ್ದೇನೆ. ಒಬ್ಬರಿಗಾಗಿ ಬಂದಿಲ್ಲ. ಎಲ್ಲರಿಗಾಗಿ ಬಂದಿದ್ದೇನೆ. ನಿಮ್ಮ ನೋವು ಕಷ್ಟಗಳನ್ನು ಕೇಳಲು ಬಂದಿದ್ದೇನೆ ಎಂದು ರಾಹುಲ್ ಹೇಳಿದ್ದಾರೆ.
ಬುಧವಾರ ವಯನಾಡಿನಲ್ಲಿ ಚುನಾವಣಾ ಪ್ರಚಾರ ರ‌್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಐದು ವರ್ಷಗಳಿಂದ ಆರ್‌ಎಸ್‌ಎಸ್ ತನ್ನ ವಿಚಾರಧಾರೆಗಳನ್ನು ದೇಶದ ಜನರ ಮೇಲೆ ಬಲವಂತವಾಗಿ ಹೇರುತ್ತಿದೆ. ಇದಕ್ಕೆ ಪ್ರಧಾನಿ ನರೇಂದ್ರಮೋದಿಯೂ ಸಾಥ್ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ವಯನಾಡಿಗೆ ನಾನು ಮನ್ ಕಿ ಬಾತ್ ಹೇಳಲು ಬಂದಿಲ್ಲ. ಬದಲಿಗೆ ನಿಮ್ಮ ಹೃದಯದ, ನಿಮ್ಮ ಆತ್ಮದ ಭಾವನೆಗಳು, ನೋವುಗಳನ್ನು ತಿಳಿದುಕೊಳ್ಳಲು ಬಂದಿದ್ದೇನೆ. ಕೇರಳ ಅಂದರೆ, ಅದು ಹಲವು ಸಂಸ್ಕೃತಿಗಳ ಮಿಶ್ರಣ ಇರುವ ರಾಜ್ಯ. ಇಲ್ಲಿ ಎಲ್ಲಾ ಭಾಷೆಯ, ಎಲ್ಲಾ ಬಗೆಯ ಜನರಿದ್ದಾರೆ. ಕೇರಳದಲ್ಲಿ ಮನುಷ್ಯ ಮತ್ತು ಪ್ರಕೃತಿ, ಮನುಷ್ಯ ಮತ್ತು ಪ್ರಾಣಿಗಳ ನಡುವೆ ಸಂಘರ್ಷ ನಡೆಯುತ್ತಲೇ ಇರುತ್ತದೆ. ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಾನು ಇಲ್ಲಿಗೆ ಬಂದಿದ್ದೇನೆ. ಇಂತಹ ಕಷ್ಟಗಳನ್ನು ಕೇಳಲು ಬಂದಿದ್ದೇನೆ ಎಂದರು.
ನಾನು ಮಂಕಿ ಬಾತ್ ಹೇಳಲು ಬಂದಿಲ್ಲ. ನಾನು ಸುಳ್ಳು ಹೇಳುವುದಿಲ್ಲ. ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿಯೂ ಹೇಳುವುದಿಲ್ಲ. ₹15 ಲಕ್ಷಗಳನ್ನು ನಿಮ್ಮ ಅಕೌಂಟಿಗೆ ಕಳುಹಿಸುತ್ತೇನೆ ಎಂದೂ ಹೇಳುವುದಿಲ್ಲ. ನಾನು ಪ್ರಾಮಾಣಿಕವಾಗಿ ಸತ್ಯವನ್ನು ಮಾತ್ರ ಹೇಳುತ್ತೇನೆ.
ನೀವು ಕೊಡುವ ಮರ್ಯಾದೆ, ಸಂಸ್ಕಾರ ಇಡೀ ದೇಶಕ್ಕೆ ಮಾದರಿ. ಎಲ್ಲರೂ ಶಾಂತಿಯುತವಾಗಿ ಬದುಕಬೇಕು. ವಯನಾಡ್ ಅಂದರೆ, ಸ್ನೇಹದಿಂದ ಇರುವ, ಸ್ನೇಹ ತೋರುವ ನಾಡು ಎಂಬುದಾಗಿ ಅರ್ಥ ಎಂದರು. ನಿಮ್ಮ ಜ್ಞಾನ, ವಿವೇಕಗಳನ್ನು ನಾನು ಗೌರವಿಸುತ್ತೇನೆ. ನನ್ನ ಇಡೀ ಜೀವನದ ಉದ್ದಕ್ಕೂ ನಿಮ್ಮ ಜೊತೆ ಇರುತ್ತೇನೆ. ನಿಮ್ಮ ಮನೆ ಮಗನಾಗಿ ಇರುತ್ತೇನೆ ಎಂದು ಹೇಳಿದರು.
ನಾನು ನಿಮ್ಮ ಧ್ವನಿಯಾಗಿರುತ್ತೇನೆ. ನೀವು ಕೇವಲ ಕೇರಳದ ಧ್ವನಿಯಲ್ಲ ಇಡೀ ದೇಶದ ಧ್ವನಿ. ಕೇರಳ ಎಂದರೆ ಇಡೀ ದೇಶ, ನಿಮ್ಮ ಭಾಷೆಗೆ ನಾನು ಗೌರವಕೊಡುತ್ತೇನೆ. ಐದು ವರ್ಷಗಳಿಂದ ಆರ್ ಎಸ್ ಎಸ್ ಮತ್ತು ನರೇಂದ್ರ ಮೋದಿ ವಿರುದ್ಧ ಹೋರಾಡುತ್ತಲೇ ಬಂದಿದ್ದೇನೆ. ಕಳೆದ 5 ವರ್ಷಗಳಿಂದ ನಾನು ಇಡೀ ದೇಶವನ್ನು ಸುತ್ತಾಡಿದ್ದೇನೆ. ಇಂತಹ ರಾಜ್ಯವನ್ನು ನಾನು ಎಲ್ಲಿಯೂ ಕಂಡಿಲ್ಲ ಎಂದು ಹೇಳಿದ್ದಾರೆ