ಬಾಗಲಕೋಟೆ (ಏ. 11): ಮುಸ್ಲಿಮರಿಗೆ ಟಿಕೆಟ್ ಕೊಡುವುದಿಲ್ಲ ಎನ್ನುವ ಈಶ್ವರಪ್ಪ ಕುರುಬರಿಗೇ ಒಂದು ಸೀಟು ಕೊಡಸಲಾಗಲಿಲ್ಲ. ಇನ್ನು ಮುಸ್ಲಿಮರಿಗೇನು ಕೊಡಿಸ್ತಾನೆ? ಎಂದು ಕಾಂಗ್ರೆಸ್ ಮುಖಂಡ ಸಿ.ಎಂ. ಇಬ್ರಾಹಿಂ ಪ್ರಶ್ನಿಸಿದ್ದಾರೆ.
ಈಶ್ವರಪ್ಪ ಪಾಪ ನೊಂದು ಬಿಟ್ಟಿದ್ದಾನೆ. ನಾವು ಪಾದ ಹಿಡಿಯೋರೇ ಹೊರತು ತಲೆ ಹಿಡಿಯುವವರಲ್ಲ. ಕನ್ನಡ ನಾಡಿನ ಜನತೆಯ ಪಾದವೇ ನಮಗೆ ಶ್ರೀರಕ್ಷೆ. ನಮ್ಮ ಸರ್ವಸ್ವವೇ ಅವರ ಪಾದದ ಮೇಲಿದೆ. ಚುನಾವಣೆ ಮುಗಿದ ಬಳಿಕ ಈಶ್ವರಪ್ಪ ಸರಿಯಾಗ್ತಾರೆ.ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸೇನೆಯನ್ನು ಮೋದಿ ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ. ಈಗ ಏನೇ ಇದ್ದರೂ ಕಾಲಾಯ ತಸ್ಮೈ ನಮಃ. ಈ ಪುಣ್ಯ ಭೂಮಿ ಮೇಲೆ ಪಾಪಿಗಳು ನಿಲ್ಲೋದಿಲ್ಲ. ರಾವಣನೂ ನಿಂತಿಲ್ಲ ದುರ್ಯೋಧನನೂ ನಿಂತಿಲ್ಲ ಎನ್ನುವ ಮೂಲಕ ಮೋದಿಯನ್ನು ರಾವಣ ಹಾಗೂ ದುರ್ಯೋಧನನಿಗೆ ಹೋಲಿಸಿ ಟೀಕಿಸಿದ್ದಾರೆ.
ಇಮ್ರಾನ್ ಖಾನ್ ಮೋದಿ ಮತ್ತೆ ಪ್ರಧಾನಿಯಾದರೆ ಕಾಶ್ಮೀರದ ಸಮಸ್ಯೆ ಶಾಂತಿ ಮಾತುಕತೆ ಮೂಲಕ ಬಗೆಹರಿಯುತ್ತದೆ ಎಂದು ಹೇಳಿರುವ ಬಗ್ಗೆ ಮಾತನಾಡಿದ ಸಿ.ಎಂ. ಇಬ್ರಾಹಿಂ, ಅದೇ ಇಮ್ರಾನ್ ಖಾನ್ ರಾಹುಲ್ ಗಾಂಧಿ ಬಗ್ಗೆ ಹೇಳಿದ್ದರೆ ಇಷ್ಟೊತ್ತಿಗಾಗಲೇ ಅಮಿತ್ ಶಾ ತಕಥೈ ಎಂದು ಕುಣಿದುಬಿಡುತ್ತಿದ್ದ. ಪಾಕಿಸ್ತಾನಕ್ಕೂ ಮೋದಿಗೂ ಗಾಢವಾದ ಸಂಬಂಧವಿದೆ. ನವಾಜ್ ಷರೀಫ್ ಕರೆಯದಿದ್ರೂ ಮೋದಿ ಗಿಫ್ಟ್ ತಗೊಂಡು ಹೋಗಿದ್ದರು ಎಂದು ಟೀಕಿಸಿದ್ದಾರೆ.ಬಿಜೆಪಿಯವರು ಬಲಿಷ್ಠ ಪ್ರಧಾನಿ ಬೇಕು ಅಂತಾರೆ. ತತ್ವ ಸಿದ್ಧಾಂತದಲ್ಲಿ ಪ್ರಧಾನಿ ಬಲಿಷ್ಠನಾಗಿರಬೇಕು. 70 ವರ್ಷದ ಇತಿಹಾಸವನ್ನು ಮೋದಿ ತಗೆದು ನೋಡಲಿ. ಮೋದಿ ಮತ್ತು ಇಮ್ರಾನ್ ಖಾನ್ ನಡುವಿನ ಒಳ ಒಪ್ಪಂದ ಬಗ್ಗೆ ಅಮಿತ್ ಶಾ ಮಾತನಾಡಬೇಕು. ಇದನ್ನೆಲ್ಲ ನೋಡಿದರೆ ಪುಲ್ವಾಮಾ, ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಅನುಮಾನ ಶುರುವಾಗಿದೆ ಎಂದಿದ್ದಾರೆ.