ಮಂಗಳೂರು: ಲೋಕಸಭೆ ಚುನಾವಣೆಗೆ ಇನ್ನೇನು ಎರಡು ವಾರಗಳು ಬಾಕಿಯಿವೆ. ಈ ಮಹಾ ಸಮರವನ್ನು ಎದುರಿಸಲು ಕಾಂಗ್ರೆಸ್-ಜೆಡಿಎಸ್ ಮತ್ತು ಬಿಜೆಪಿ ಸಜ್ಜಾಗಿವೆ. ಕರ್ನಾಟಕದಲ್ಲೀಗ ಕಾಲಿಗೆ ಚಕ್ರ ಕಟ್ಟಿಕೊಂಡು ಚುನವಾಣೆ ಗೆಲ್ಲಲೆಂದು ಅಭ್ಯರ್ಥಿಗಳು ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ಈ ಮಧ್ಯೆ ಮಂಡ್ಯದಂತೆಯೇ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಭಾರೀ ಸದ್ದು ಮಾಡುತ್ತಿದೆ.
ಇಲ್ಲಿನ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮತ್ತೆ ಕಣಕ್ಕಿಳಿದಿರುವ ಹಾಲಿ ಸಂಸದ ನಳೀನ್ ಕುಮಾರ್ ಕಟೀಲ್ ಅಗ್ನಿ ಪರೀಕ್ಷೆಗೆ ಮುಂದಾಗಿದ್ಧಾರೆ. ಈ ನಡುವೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಟೀಲ್ ವಿರುದ್ಧ ಸ್ಪರ್ಧಿಸುತ್ತಿರುವ ಮಿಥುನ್ ರೈ ಕೇಸರಿ ಶಾಲು ಹಾಕಿ ಪ್ರಚಾರ ಮಾಡುತ್ತಿದ್ದಾರೆ. ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಈ ಬೆನ್ನಲ್ಲೇ ಮಿಥುನ್ ರೈ ಪ್ರಚಾರದ ಶೈಲಿಗೆ ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರ ಜತೆ ಮಾತಾಡಿದ ಮಾಜಿ ಡಿಸಿಎಂ ಆರ್. ಅಶೋಕ್ ಅವರು, ಕಾಂಗ್ರೆಸ್ ನಾಟಕ ಕಂಪನಿ ಇದ್ದಹಾಗೇ. ಕೇಸರಿ ಶಾಲು ಹಾಕಿದ ಕೂಡಲೇ ಜನ ನಿಮಗೆ ವೋಟ್ ಹಾಕಲ್ಲ. ಕೇಸರಿ ಶಾಲಿಗೆ ತನ್ನದೇ ಆದ ಮಹತ್ವ ಇದೆ. ಚುನಾವಣೆಯಲ್ಲಿ ಗೆಲ್ಲಲು ಮತದಾರರನ್ನು ಸೆಳೆಯಲು ತೋರಿಕೆಗೆ ಕೇಸರಿ ಶಾಲು ಹಾಕಿದರು, ಜನ ಬಿಜೆಪಿಯನ್ನೇ ಗೆಲ್ಲಿಸುತ್ತಾರೆ ಎಂದು ಮಿಥುನ್ ರೈ ವಿರುದ್ಧ ವಾಗ್ದಾಳಿ ನಡೆಸಿದ್ಧಾರೆ.