janadhvani

Kannada Online News Paper

ಗೂಗಲ್ ನಲ್ಲಿ ಚುನಾವಣೆ ಜಾಹಿರಾತಿಗಾಗಿ 1.21 ಕೋಟಿ ವ್ಯಯಿಸಿದ ಬಿಜೆಪಿ ಪ್ರಥಮ

ನವದೆಹಲಿ: ಭಾರತದ ರಾಜಕೀಯ ಪಕ್ಷಗಳು ಮತ್ತು ಅದರ ಅಂಗ ಸಂಸ್ಥೆಗಳು ಕಳೆದ ಫೆಬ್ರುವರಿ 19ರಿಂದ ಈಚೆಗೆ ಗೂಗಲ್‌ನಲ್ಲಿ ಸರಿಸುಮಾರು ₹3.76 ಕೋಟಿಯಷ್ಟು ಚುನಾವಣಾ ಜಾಹಿರಾತು ನೀಡಿವೆ. ಈ ಬಗ್ಗೆ ಗೂಗಲ್‌ ಗುರುವಾರ ‘ಪಾರದರ್ಶಕ ವರದಿ’ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಆಡಳಿತಾರೂಢ ಬಿಜೆಪಿ ಮೊದಲ ಸ್ಥಾನದಲ್ಲಿದ್ದರೆ ಕಾಂಗ್ರೆಸ್‌ ಆರನೇ ಸ್ಥಾನದಲ್ಲಿದೆ. 

ಕಳೆದ ಜನವರಿಯಲ್ಲಿ ಗೂಗಲ್‌ ತನ್ನ ಚುನಾವಣಾ ಜಾಹಿರಾತು ನೀತಿಯನ್ನು ಪರಿಷ್ಕರಿಸಿತ್ತು. ತನ್ನ ವೇದಿಕೆಯಲ್ಲಿ ಬಿತ್ತರವಾಗುವ ಜಾಹಿರಾತುಗಳಲ್ಲಿ ಹೆಚ್ಚಿನ ಪಾರದರ್ಶಕತೆ ಕಾದುಕೊಳ್ಳುವ ಮತ್ತು ಸಮಗ್ರ ಮಾಹಿತಿಯನ್ನು ಬಹಿರಂಗವಾಗಿ ಘೋಷಿಸಿಕೊಳ್ಳುವತ್ತ ಅದು ಹೆಜ್ಜೆ ಹಾಕಿತ್ತು. ಈ ನೀತಿಯ ಪ್ರಕಾರ ಯಾವುದೇ ರಾಜಕೀಯ ಪಕ್ಷ ಗೂಗಲ್‌ನಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ನೀಡಲು ಬಯಸುವ ಪ್ರತಿ ಜಾಹಿರಾತಿಗೂ ಚುನಾವಣೆ ಆಯೋಗ ಅಥವಾ ಚುನಾವಣೆ ಸಮಿತಿಯ ಪ್ರಮಾಣ ಪತ್ರ ಸಲ್ಲಿಕೆ ಮಾಡಬೇಕಿತ್ತು. ಈ ನೀತಿಯಂತೇ ತಾನು ಜಾಹಿರಾತು ಪ್ರಕಟಿಸಿರುವುದಾಗಿ ಗೂಗಲ್‌ ಹೇಳಿಕೊಂಡಿದೆ.

ಜಾಹಿರಾತು ಕೊಡುವುದರಲ್ಲಿ ಯಾವ ಪಕ್ಷ ಮುಂದಿದೆ, ಯಾವ ಪಕ್ಷ ಎಷ್ಟು ಹಣ ಖರ್ಚು ಮಾಡಿದೆ ಎಂಬುದರ ಮಾಹಿತಿಯುಳ್ಳ ‘ಪಾರರ್ದರ್ಶಕ ವರದಿ’ಯನ್ನು ಗೂಗಲ್‌  ಬಹಿರಂಗಪಡಿಸಿದೆ. ಅದರಂತೆ ಫೆ.19ರಿಂದ ಈಚೆಗೆ ಈ ವರೆಗೆ ಎಲ್ಲ ಪಕ್ಷಗಳಿಂದಲೂ ₹3.76 ಕೋಟಿ ಮೊತ್ತದ 831 ಜಾಹಿರಾತುಗಳು ಪ್ರಕಟವಾಗಿರುವುದಾಗಿ ಗೂಗಲ್‌ ಹೇಳಿದೆ. ಬಿಜೆಪಿ ₹1.21 ಕೋಟಿ ವ್ಯಯಿಸಿ 554 ಜಾಹಿರಾತುಗಳನ್ನು ನೀಡಿದೆ. ಈ ಮೂಲಕ ಮೊದಲ ಸ್ಥಾನದಲ್ಲಿದೆ. 

ಇನ್ನು 107 ಜಾಹಿರಾತು ನೀಡಿರುವ ಆಂಧ್ರಪ್ರದೇಶದ ವೈ.ಎಸ್‌ ಜಗನ್‌ ಮೋಹನ್‌ ರೆಡ್ಡಿ ಅವರ ನೇತೃತ್ವದ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ₹1.4 ಕೋಟಿ ಖರ್ಚು ಮಾಡಿ ಎರಡನೇ ಸ್ಥಾನದಲ್ಲಿದೆ. ಇದೇ ವೇಳೆ ಆಂಧ್ರದ ಟಿಡಿಪಿ ಕೂಡ ₹85.25 ಲಕ್ಷದಷ್ಟು ಜಾಹಿರಾತುಗಳನ್ನು ನೀಡಿದೆ. ಟಿಡಿಪಿ ಮತ್ತು ಚಂದ್ರಬಾಬು ನಾಯ್ಡು ಅವರ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಮತ್ತೊಂದು ಸಂಸ್ಥೆ ಡಿಜಿಟಲ್‌ ಕನ್ಸಲ್ಟಿಂಗ್‌ ಪ್ರೈ.ಲಿ ₹63.43 ಲಕ್ಷದಷ್ಟು ಜಾಹಿರಾತು ನೀಡುವ ಮೂಲಕ ನಾಲ್ಕನೇ ಸ್ಥಾನದಲ್ಲಿದೆ. ಆಂಧ್ರ ಪ್ರದೇಶದಲ್ಲಿ ಲೋಕಸಭೆ ಜತೆಗೇ ವಿಧಾನಸಭೆ ಚುನಾವಣೆಯೂ ನಡೆಯುತ್ತಿದೆ. 

ಇನ್ನು ₹54,100 ಖರ್ಚು ಮಾಡಿ 14 ಜಾಹಿರಾತುಗಳನ್ನು ನೀಡಿರುವ ಕಾಂಗ್ರೆಸ್‌ ಗೂಗಲ್‌ನ ಚುನಾವಣಾ ಜಾಹಿರಾತುದಾರರ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.ಇದೇ ವೇಳೆ ರಾಜಕೀಯ ಪಕ್ಷದ ನಾಲ್ಕು ಅಂಗ ಸಂಸ್ಥೆಗಳು ಜಾಹಿರಾತು ನೀತಿಯನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಅವುಗಳಿಗೆ ನಿರ್ಬಂಧ ಹೇರಿರುವುದಾಗಿಯೂ ಗೂಗಲ್‌ ಹೇಳಿದೆ.  

error: Content is protected !! Not allowed copy content from janadhvani.com