ನವದೆಹಲಿ: ಆರ್ ಎಸ್ಎಸ್ ಮಾಜಿ ಕಾರ್ಯಕರ್ತ ಸ್ವಾಮಿ ಅಸೀಮಾನಂದ ಸೇರಿ ಎಲ್ಲಾ ನಾಲ್ವರು ಆರೋಪಿಗಳನ್ನು ಪಂಚಕುಲ ಎನ್ಐಎ ವಿಶೇಷ ಕೋರ್ಟ್ ಖುಲಾಸೆಗೊಳಿಸಿ ಬುಧವಾರ ತೀರ್ಪು ನೀಡಿದೆ. ಸಂಜೋತಾ ಎಕ್ಸ್ ಪ್ರೆಸ್ಸ್ ರೈಲು ಸ್ಟೋಟ ಪ್ರಕರಣದಲ್ಲಿ ಆರೋಪಿಗಳಾಗಿ ತನಿಖೆ ಎದುರಿಸುತ್ತಿದ್ದ ಈ ಮಂದಿಯ ದೂರನ್ನು ಖುಲಾಸೆಗೊಳಿಸಿದೆ.
2007 ರ ಫೆ.18 ರಂದು ಹರ್ಯಾಣದ ಪಾನಿಪತ್ ನಲ್ಲಿ ಸಂಜೋತಾ ಎಕ್ಸ್ ಪ್ರೆಸ್ ನಲ್ಲಿ ಬಾಂಬ್ ಸ್ಫೋಟಗೊಂಡು 68 ಜನರು ಸಾವನ್ನಪ್ಪಿದ್ದ ಈ ಪ್ರಕರಣ ಸಂದರ್ಭ ಬೇರೆ ಬೋಗಿಗಳಲ್ಲೂ ಎರಡು ಜೀವಂತ ಸೂಟ್ಕೇಸ್ ಬಾಂಬ್ಗಳು ಪತ್ತೆಯಾಗಿದ್ದವು. 2016 ರ ಡಿಸೆಂಬರ್ ನಲ್ಲಿ ಪ್ರಕರಣದ ಪ್ರಮುಖ ಆರೋಪಿ ಅಸೀಮಾನಂದ ಜಾಮೀನು ಪಡೆದಿದ್ದರು. ಇತರ ಕೆಲವು ಆರೋಪಿಗಳು ಬಂಧನದಲ್ಲೇ ಇದ್ದು, ಇದೀಗ ಬಿಡುಗಡೆಗೊಳಿಸಿದೆ.
ಸಂಜೋತಾ ರೈಲು ಸ್ಫೋಟ ಪ್ರಕರಣ ಸುದೀರ್ಘ ವಿಚಾರಣೆ ನಡೆಸಿದ ಕೋರ್ಟ್, ನಾಲ್ವರು ಆರೋಪಿಗಳಾದ ಆಸೀಮಾನಂದ, ಲೋಕೇಶ್ ಶರ್ಮಾ, ಕಮಲ್ ಚೌವ್ಹಾಣ್ ಹಾಗೂ ರಾಜೀಂದ್ರ ಚೌಧರಿಯನ್ನು ಖುಲಾಸೆಗೊಳಿಸಿದೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಸಾಕ್ಷ್ಯ ಒದಗಿಸಲು ಅನುಮತಿ ಕೋರಿ ಪಾಕಿಸ್ತಾನದ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.