janadhvani

Kannada Online News Paper

13 ಸಾವಿರ ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದ ನೀರವ್ ಮೋದಿ ಬಂಧನ

ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ 13 ಸಾವಿರ ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದ ವಜ್ರದ ಉದ್ಯಮಿ ನೀರವ್ ಮೋದಿಯನ್ನು ಲಂಡನ್ನಲ್ಲಿ ಬಂಧಿಸಲಾಗಿದೆ.

ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್ನಿಂದ 13 ಸಾವಿರ ಕೋಟಿ ರೂಪಾಯಿ ಸಾಲ ಪಡೆದು ಮರುಪಾವತಿ ಮಾಡದೇ ತಲೆತಪ್ಪಿಸಿಕೊಂಡಿದ್ದರು. ಆದರೀಗ ಅವರನ್ನು ಲಂಡನ್ನಲ್ಲಿ ಬಂಧಿಸಲಾಗಿದ್ದು ಭಾರತದ ಜತೆ ಹಸ್ತಾಂತರ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ.

ಕೆಲ ದಿನಗಳ ಹಿಂದೆ ಇಂಗ್ಲೆಂಡ್ನ ಪತ್ರಿಕೆ ‘ಟೆಲಿಗ್ರಾಫ್’ ವರದಿಗಾರರೊಬ್ಬರಿಗೆ ಅಚಾನಕ್ಕಾಗಿ ನೀರವ್ ಮೋದಿ ಸಿಕ್ಕಿದ್ದರು. ಲಕ್ಷಾಂತರ ರೂ. ಬೆಲೆ ಬಾಳುವ ಆಸ್ಟ್ರಿಚ್ ಲೆದರ್ ಜ್ಯಾಕೆಟ್ ಹಾಕಿಕೊಂಡು ರಾಜಾರೋಷವಾಗಿ ನೀರವ್ ಮೋದಿ ತಿರುಗಾಡುತ್ತಿದ್ದಾಗ ವರದಿಗಾರರೊಬ್ಬರು ಭಾರತಕ್ಕೆ ಮರಳುವ ಮತ್ತು ತೆರಿಗೆದಾರರಿಗೆ ವಂಚಿಸಿರುವ ಹಣವನ್ನು ಮರುಪಾವತಿ ಮಾಡುವ ಬಗ್ಗೆ ಕೇಳಿದಾಗ “ನೋ ಕಮೆಂಟ್” ಎಂದು ಪ್ರತಿಕ್ರಯಿಸಿದ್ದರು.

ಲಂಡನ್ ನಲ್ಲಿ ನೆಲೆಸಿದ್ದ ಬಗ್ಗೆ ಮಾಧ್ಯಮ ವರದಿ ಪ್ರಕಟವಾದ ಬಳಿಕ ಭಾರತ ಸರ್ಕಾರ ಇಂಗ್ಲೆಂಡ್ ಸರ್ಕಾರದ ಜೊತೆ ನೀರವ್ ಬಂಧನಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿತ್ತು. ಇದಾದ ಬಳಿಕ ಬ್ರಿಟನ್‍ನ ವೆಸ್ಟ್ ಮಿನ್‍ಸ್ಟರ್ ಕೋರ್ಟ್ ನೀರವ್ ಮೋದಿ ಬಂಧನಕ್ಕೆ ವಾರಂಟ್ ಜಾರಿ ಮಾಡಿತ್ತು. ವಾರಂಟ್ ಜಾರಿಯಾದ ಹಿನ್ನೆಲೆಯಲ್ಲಿ ನೀರವ್ ಮೋದಿ ಬಂಧನವಾಗಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಸದ್ಯದಲ್ಲೇ ನೀರವ್ ಮೋದಿ ಭಾರತಕ್ಕೆ ಹಸ್ತಾಂತರವಾಗುವ ಸಾಧ್ಯತೆಯಿದೆ.

error: Content is protected !! Not allowed copy content from janadhvani.com