ಪಣಜಿ: ನೂತನ ಗೋವಾದ ಮುಖಮಂತ್ರಿಯಾಗಿ ನೇಮಕವಾಗಿದ್ದ ಪ್ರಮೋದ್ ಸಾವಂತ್ ಇಂದು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಹುಮತ ಸಾಬೀತು ವೇಳೆ ಪ್ರಮೋದ್ ಸಾವಂತ್ ಅವರ ಪರವಾಗಿ 20 ಮತಗಳು ಬಂದರೆ, 15 ಮತಗಳು ಅವರ ವಿರುದ್ಧ ಬಂದವು. ಸರಳ ಬಹುಮತ ಸಾಬೀತು ಮಾಡಲು 19 ಮತಗಳು ಅವಶ್ಯಕತೆ ಇತ್ತು . ಆದರೆ ಈ ಗಡಿಯನ್ನು ಸಿಎಂ ಸಾವಂತ್ ಸುಲಭವಾಗಿ ದಾಟುವಲ್ಲಿ ಯಶಸ್ವಿಯಾಗಿದ್ದಾರೆ.40 ಸದಸ್ಯರ ಸದನದಲ್ಲಿ 36 ಸದಸ್ಯರು ಮಾತ್ರ ಇದ್ದಿದ್ದರಿಂದ 19 ಸದಸ್ಯರು ಬಹುಮತ ಸಾಬೀತುಪಡಿಸಲು ಅವಶ್ಯಕತೆ ಇತ್ತು. ಆದರೆ ಸಿಎಂ 20 ಸದಸ್ಯರ ಬೆಂಬಲವನ್ನು ಪಡೆಯುವ ಮೂಲಕ ಕಾಂಗ್ರೆಸ್ ಪಕ್ಷದ ಕನಸನ್ನು ಭಗ್ನ ಮಾಡಿದರು.
ಮನೋಹರ್ ಪರಿಕ್ಕರ್ ನಿಧನದ ನಂತರ ಮೈತ್ರಿಪಕ್ಷಗಳಾದ ಗೋವಾ ಫಾರ್ವರ್ಡ್ ಪಾರ್ಟಿ ಮತ್ತು ಮಹಾತ್ವಾರಾವಾಡಿ ಗೋಮಾಂತಕ್ ಪಾರ್ಟಿಗಳಲ್ಲಿ ಮುಂದಿನ ಸಿಎಂ ಯಾರು ಎನ್ನುವ ಕುರಿತಾಗಿ ಚರ್ಚೆ ನಡೆಯಿತು. ಆದರೆ ಕೊನೆಗೂ ಒಪ್ಪಂದಕ್ಕೆ ಬಂದ ಮೈತ್ರಿಪಕ್ಷಗಳು ಪ್ರಮೋದ್ ಸಾವಂತ್ ರನ್ನು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಲು ಒಪ್ಪಿಗೆ ನೀಡಿದವು.