ನವದೆಹಲಿ (ಫೆ.26): ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಡಗಿರುವ ಉಗ್ರರ ಮೇಲೆ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ. ಆದರೆ, ಆ ರೀತಿ ಏನು ಆಗಿಲ್ಲ ಎಂದು ಪಾಕಿಸ್ತಾನ ಹೇಳಿಕೊಳ್ಳುತ್ತಿದೆ. ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ವಿಜಯ್ ಗೋಖಲೆ, “ನಾವು ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ನಡೆಸಿದ್ದು ಸತ್ಯ,” ಎಂದಿದ್ದಾರೆ.
ವಿದೇಶಾಂಗ ಸಚಿವಾಲಯ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯ್, “ಮಂಗಳವಾರ ಬೆಳಗ್ಗೆ ಬಾಲಕೋಟ್ ಪ್ರದೇಶದಲ್ಲಿ ಉಗ್ರರ ವಿರುದ್ಧ ದಾಳಿ ನಡೆದಿದೆ. ಈ ವೇಳೆ ಕೆಲ ಪ್ರಮುಖ ಉಗ್ರರನ್ನು ಹೊಡೆದುರುಳಿಸಲಾಗಿದೆ. ಜೆಇಎಮ್ ಉಗ್ರರು, ತರಬೇತುದಾರರು, ಹಿರಿಯ ಕಮಾಂಡರ್ಗಳು ಸತ್ತಿದ್ದಾರೆ. ಮಸೂದ್ ಅಜರ್ ಅಳಿಯ ಉಸ್ತಾದ್ ಘೌರಿ ಈ ಶಿಬಿರ ನಡೆಸುತ್ತಿದ್ದ,” ಎಂದು ಮಾಹಿತಿ ನೀಡಿದರು.
ಉಗ್ರ ನಾಶಕ್ಕೆ ಪಾಕಿಸ್ತಾನ ಸರಿಯಾದ ರೀತಿಯಲ್ಲಿ ಕ್ರಮ ಕೈಗೊಳ್ಳದ ಕಾರಣ ನಾವು ಈ ದಾಳಿ ನಡೆಸಿದ್ದೇವೆ ಎಂದಿರುವ ವಿಜಯ್, “ಭಯೋತ್ಪಾದನೆ ವಿರುದ್ಧ ಹೋರಾಡಲು ಭಾರತ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ. ಜೆಇಎಂ ಉಗ್ರರನ್ನು ನಾಶ ಮಾಡಲು ಪಾಕಿಸ್ತಾನ ಕ್ರಮ ಕೈಗೊಳ್ಳಬೇಕು. ನಾವು ದಾಳಿ ನಡೆಸಿದ್ದೇವೆ ಹೊರತು ಪಾಕ್ ವಿರುದ್ಧ ಯುದ್ಧ ಸಾರಿಲ್ಲ,” ಎಂದರು. ಏರ್ ಸ್ಟ್ರೈಕ್ ನಲ್ಲಿ ಬಾಲಕೋಟ್ ಜೈಷ್ ಎ ಮೊಹಮ್ಮದ್ ಕ್ಯಾಂಪ್ ಸಂಪೂರ್ಣವಾಗಿ ಧ್ವಂಸವಾಗಿದೆ. ಇದರಲ್ಲಿ ಜೈಷ್ ಕಮಾಂಡರ್ ಸೇರಿದಂತೆ ನೂರಾರು ಉಗ್ರರರನ್ನು ಸದೆಬಡಿಯಲಾಗಿದೆ ಎಂದು ವಿಜಯ್ ಗೋಖಲೆ ತಿಳಿಸಿದ್ದಾರೆ.
ಪುಲ್ವಾಮಾ ದಾಳಿಗೆ ಭಾರತೀಯ ಸೇನೆ ಇಂದು ಮುಂಜಾನೆ ಪ್ರತೀಕಾರ ತೀರಿಸಿಕೊಂಡಿತು. ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿದ ಭಾರತೀಯ ಯುದ್ಧ ವಿಮಾನಗಳು ಅಲ್ಲಿರುವ ಉಗ್ರರ ಅಡಗು ತಾಣಗಳನ್ನು ನಾಶ ಮಾಡಿದೆ. ಈ ಮೂಲಕ ಸರ್ಜಿಕಲ್ ಸ್ಟ್ರೈಕ್ 2 ನಡೆಸುವಲ್ಲಿ ಭಾರತ ಯಶಸ್ವಿಯಾಗಿದೆ.
1971ರ ಯುದ್ಧದ ನಂತರ ಇದೇ ಮೊದಲ ಬಾರಿಗೆ ಐಎಎಫ್ ಗಡಿಯಾಚೆಗೆ ನುಗ್ಗಿದೆ ಎಂದು timesofindia ವರದಿ ಮಾಡಿದೆ. ಇಂದು ಬೆಳಗಿನ ಜಾವ 3.30ರ ಸುಮಾರಿಗೆ ಬಾಲಕೋಟ್ ಪ್ರದೇಶದಲ್ಲಿ ದಾಳಿ ನಡೆಸಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಅಡಗಿರುವ ಉಗ್ರ ತಾಣಗಳ ಮೇಲೆ ದಾಳಿ ನಡೆದಿದೆ. 200-300 ಉಗ್ರರು ದಾಳಿಯಲ್ಲಿ ಸತ್ತಿದ್ದಾರೆ ಎನ್ನಲಾಗುತ್ತಿದೆ. 12 ಮಿರಾಜ್ ಯುದ್ಧ ವಿಮಾನಗಳು ದಾಳಿಯಲ್ಲಿ ಪಾಲ್ಗೊಂಡಿದ್ದವು ಎನ್ನಲಾಗಿದೆ.