ನವದೆಹಲಿ,ಫೆ.20: ಸೌದಿ ಆರೇಬಿಯಾದ ವಿವಿಧ ಜೈಲುಗಳಲ್ಲಿರುವ 850 ಭಾರತೀಯರನ್ನು ಬಿಡುಗಡೆ ಗೊಳಿಸಲಾಗುವುದು ಎಂದು ಸೌದಿ ಅರೇಬಿಯಾ ತಿಳಿಸಿದೆ.
ಪ್ರಧಾನಿ ಮೋದಿಯವರ ಅಪೇಕ್ಷೆಯಂತೆ ಸೌದಿ ದೊರೆ ಮುಹಮ್ಮದ್ ಬಿನ್ ಸಲ್ಮಾನ್ ಈ ಕಾರ್ಯವನ್ನು ಘೋಷಿಸಿದ್ದಾರೆ. 2084 ಭಾರತೀಯರು ಸೌದಿ ಅರೇಬಿಯಾದ ವಿವಿಧ ಜೈಲುಗಳಲ್ಲಿರುವುದಾಗಿ ಈ ಹಿಂದೆ ಸರಕಾರ ವ್ಯಕ್ತಪಡಿಸಿತ್ತು.
ಭಾರತೀಯ ಹಜ್ ಕೊಟಾ ಹೆಚ್ಚಳ
ಸೌದಿ ಅರೇಬಿಯಾ ಬುಧವಾರ ಭಾರತದ ಹಜ್ ಕೋಟಾದಲ್ವಿ 25,000 ಏರಿಕೆ ಮಾಡಿದೆ. ಇದರೊಂದಿದೆ ದೇಶದಿಂದ ಹಜ್ ಯಾತ್ರೆಗೆ ಹೋಗುವವರ ಸಂಖ್ಯೆ ವಾರ್ಷಿಕ 2 ಲಕ್ಷಕ್ಕೆ ಏರಿಕೆಯಾಗಿದೆ.
ಭಾರತಕ್ಕೆ ಭೇಟಿ ನೀಡಿದ ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತುಕತೆ ನಡೆಸಿದ ಬಳಿಕ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಘೋಷಣೆ ಮಾಡಿದೆ.
ಏರಿಕೆಯಾದ ಕೋಟಾ ಸಾಗಾಟ ಹಾಗೂ ಇತರ ಅಂಶಗಳನ್ನು ಅವಲಂಬಿಸಿ ಅನುಷ್ಠಾನಗೊಳಿಸಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ (ಆರ್ಥಿಕ ವ್ಯವಹಾರ) ಟಿ.ಎಸ್. ಗುರುಮೂರ್ತಿ ಹೇಳಿದ್ದಾರೆ. ಈ ಕೋಟಾ ಈ ವರ್ಷದಿಂದ ಅಸ್ತಿತ್ವಕ್ಕೆ ಬರಲಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಹೇಳಿದ್ದಾರೆ.
ಭಾರತ ಮತ್ತು ಸೌದಿ ಮಧ್ಯೆ ವೈಮಾನಿಕ ಸೇವೆಯನ್ನು ಹೆಚ್ಚಿಸುವಂತೆ ತೀರ್ಮಾನ ಕೈಗೊಳ್ಳಲಾಗಿದೆ. ಅನಿವಾಸಿಗಳಿಗೆ ಇದು ಹೆಚ್ಚು ಅನುಕೂಲವಾಗಲಿದೆ.
ಭಯೋತ್ಪಾದನೆ ಮತ್ತು ಉಗ್ರವಾದ ಸಮಸ್ಯೆಗಳ ನಿವಾರಣೆ ನಿಟ್ಟಿನಲ್ಲಿ ಸಮಾನ ಕಾಳಜಿ ವಹಿಸಿದ್ದು, ಮುಂದಿನ ಜನಾಂಗದ ಸುರಕ್ಷತೆ ಖಾತರಿಪಡಿಸಿಕೊಳ್ಳಲು ಭಾರತ ಹಾಗೂ ನೆರೆಯ ರಾಷ್ಟ್ರಗಳಿಗೆ ಸಂಪೂರ್ಣ ಸಹಕಾರ ನೀಡಲಿದ್ದೇವೆ. ಈ ವಿಚಾರದಲ್ಲಿ ಭಾರತ ವಹಿಸಿರುವ ಪಾತ್ರವನ್ನು ಪ್ರಶಂಸಿಸುತ್ತೇವೆ. ಗುಪ್ತಚರ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ಭಾರತಕ್ಕೆ ಸಹಕಾರ ನೀಡಲಿದ್ದೇವೆ– ಸೌದಿ ದೊರೆ ಸಲ್ಮಾನ್
ಯಾವುದೇ ರೀತಿಯೂ ಭಯೋತ್ಪಾದನೆಗೆ ಬೆಂಬಲ ನೀಡದಿರುವ ಬಗ್ಗೆ ನಾವು ಒಮ್ಮತಕ್ಕೆ ಬಂದಿದ್ದೇವೆ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ರಾಷ್ಟ್ರಗಳ ಮೇಲೆ ಒತ್ತಡ ಹೇರಬೇಕಾದುದು ಅವಶ್ಯವಾಗಿದೆ. ಉಗ್ರ ಸಂಘಟನೆಗಳಿಗೆ ನೀಡುತ್ತಿರುವ ಬೆಂಬಲ ಕೊನೆಯಾಗಿಸುವುದು, ಭಯೋತ್ಪಾದನೆ ಅವಕಾಶಗಳಿಗೆ ಅಂತ್ಯ ಹಾಡುವುದು; ಈ ಮೂಲಕ ಯುವ ಜನರು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳದಂತೆ ಮಾಡುವುದು…ಈ ಕುರಿತು ಸೌದಿ ಅರೇಬಿಯಾ ಭಾರತದ ಮಾತಿಗೆ ಸಮ್ಮತಿಸಿದೆ– ಪ್ರಧಾನಿ ನರೇಂದ್ರ ಮೋದಿ
ಇಂಧನ ಪಾಲುದಾರಿಕೆಯೊಂದಿಗೆ ತಂತ್ರ ಕುಶಲತೆಗಳಲ್ಲಿಯೂ ಒಪ್ಪಂದದ ಸಂಬಂಧವೂ ಮಾತುಕತೆ ನಡೆದಿದೆ. ಮೂಲಸೌಕರ್ಯಗಳಲ್ಲಿ ಸೌದಿ ಹೂಡಿಕೆಯನ್ನು ಸ್ವಾಗತಿಸಿದ್ದೇನೆ, ನಮ್ಮ ಸಂಬಂಧ ಕೇವಲ ಕೊಡು–ಕೊಳ್ಳುವಿಕೆ ಮಾತ್ರ ಸೀಮಿತವಾಗಿ ಉಳಿದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.
ಶಿಷ್ಟಾಚಾರಗಳನ್ನು ಮುರಿದು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಸ್ವತಃ ಪ್ರಧಾನಿ ಮೋದಿ ಅಪ್ಪುಗೆಯೊಂದಿಗೆ ಸೌದಿ ದೊರೆಯನ್ನು ಬರಮಾಡಿಕೊಂಡಿದ್ದರು
ಭಾರತ ಮತ್ತು ಅರಬ್ ನಡುವಿನ ಸಂಬಂಧ ಡಿಎನ್‌ಎಯಲ್ಲಿ ಬೆರೆತಿದೆ ಎಂದು ಸೌದಿ ದೊರೆ ಸಲ್ಮಾನ್ ವರದಿಗಾರರಿಗೆ ಪ್ರತಿಕ್ರಿಯಿಸಿದ್ದರು