ನವದೆಹಲಿ: ಸೌದಿ ಅರೇಬಿಯಾದ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಮಂಗಳವಾರ ರಾತ್ರಿ ಭಾರತಕ್ಕೆ ಬಂದಿದ್ದು, ಎರಡು ದಿನಗಳ ಪ್ರವಾಸದಲ್ಲಿರಲಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನನ್ನ ಅಣ್ಣನಂತೆ, ನಾವಿಬ್ಬರೂ ಸಹೋದರರು ಎಂದು ಸೌದಿ ಆರೇಬಿಯಾ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಹೇಳಿದ್ದಾರೆ.
ಭಯೋತ್ಪಾದನೆ ವಿರುದ್ಧ ಗಟ್ಟಿ ಸಂದೇಶ ರವಾನಿಸುವುದು ಹಾಗೂ ಉಭಯ ರಾಷ್ಟ್ರಗಳ ಸಂಬಂಧ ವೃದ್ಧಿಗಾಗಿ ಹಲವು ಪಾಲುದಾರಿಕೆ ಒಪ್ಪಂದಗಳು ನಡೆಯುವ ಸಾಧ್ಯತೆಯಿದೆ.ರಾಷ್ಟ್ರರಾಜಧಾನಿ ನವದೆಹಲಿಯ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಲ್ಮಾನ್ ಅವರನ್ನು ಬರಮಾಡಿಕೊಂಡರು. ಸೌದಿ ದೊರೆಯನ್ನು ಸ್ವಾಗತಿಸಿದ ನಂತರ ಮೋದಿ ಫೋಟೊ ಸಹಿತ ಸಂದೇಶ ಟ್ವೀಟಿಸಿದ್ದಾರೆ. ಸೌದಿ ದೊರೆ ವಿಮಾನದಿಂದ ಇಳಿಯುತ್ತಿದ್ದಂತೆ ಪ್ರಧಾನಿ ಮೋದಿ ಎಂದಿನ ಶೈಲಿಯಲ್ಲಿ ಅಪ್ಪುಗೆಯೊಂದಿಗೆ ಸ್ವಾಗತಿಸಿದರು.
ಇದೇ ಮೊದಲ ಬಾರಿಗೆ ಸೌದಿ ದೊರೆ ಸಲ್ಮಾನ್ ಭಾರತ ಭೇಟಿ ನೀಡುತ್ತಿದ್ದು, ಉಭಯ ರಾಷ್ಟ್ರಗಳ ನಡುವಿನ ಸಂಬಂಧದಲ್ಲಿ ಇದೊಂದು ಹೊಸ ಅಧ್ಯಾಯದ ಆರಂಭ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿಕೊಂಡಿದ್ದಾರೆ.
ಪಾಕಿಸ್ತಾನ ಭೇಟಿಯ ಮೂಲಕ ದಕ್ಷಿಣ ಏಷ್ಯಾ ಪ್ರವಾಸ ಆರಂಭಿಸಿದ ಸಲ್ಮಾನ್, ಭಾರತ ಪ್ರವಾಸದ ಬಳಿಕ ಚೀನಾಕ್ಕೆ ಭೇಟಿ ನೀಡಲಿದ್ದಾರೆ. ಪುಲ್ವಾಮಾದಲ್ಲಿ ನಡೆದ ದಾಳಿಯ ಬಳಿಕ ಭಾರತ–ಪಾಕಿಸ್ತಾನ ನಡುವೆ ಉದ್ಭವಿಸಿರುವ ಆತಂಕದ ವಾತಾವರಣ ಸಲ್ಮಾನ್ ಭೇಟಿಯಿಂದ ತಿಳಿಯಾಗಬಹುದು ಎಂದೂ ವಿಶ್ಲೇಷಿಸಲಾಗುತ್ತಿದೆ. ಎಂಬಿಎಸ್ ಎಂದೇ ಕರೆಸಿಕೊಳ್ಳುವ ಸಲ್ಮಾನ್, ಪಾಕಿಸ್ತಾನದಲ್ಲಿ ₹1.42 ಲಕ್ಷ ಕೋಟಿ ಮೌಲ್ಯದ ಹೂಡಿಕೆ ಸೇರಿ ಹಲವು ಒಪ್ಪಂದಗಳಿಗೆ ಸಹಿ ಹಾಕಿದ್ದರು. ಪಾಕಿಸ್ತಾನದಿಂದ ಸೌದಿ ಅರೇಬಿಯಾಗೆ ಮರಳಿ ಕೆಲವು ಗಂಟೆ ಮನೆಯಲ್ಲಿ ಕಳೆದು, 3 ಸಾವಿರ ಕಿ.ಮೀ. ಪ್ರಯಾಣದ ಮೂಲಕ ಭಾರತಕ್ಕೆ ಬಂದಿದ್ದಾರೆ. ಬಂಡಾವಾಳ ಹೂಡಿಕೆ, ಪ್ರವಾಸ, ವಸತಿ ಹಾಗೂ ಪ್ರಸಾರಕ್ಕೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳು ಐದು ಒಪ್ಪಂದಗಳನ್ನು ಮಾಡಿಕೊಳ್ಳಲಿವೆ.
ಎರಡೂ ದೇಶಗಳ ನಿಯೋಗದ ಸಭೆ ಬುಧವಾರ ಹೈದರಾಬಾದ್ ಹೌಸ್ ನಲ್ಲಿ ನಡೆಯುತ್ತಿದೆ. ಸೌದಿ ದೊರೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶೇಷ ಭೋಜನ ಕೂಟ ಏರ್ಪಡಿಸಿದ್ದಾರೆ. ಸೌದಿ ದೊರೆ ಭಾರತದಲ್ಲಿ ಹೂಡಿಕೆ ಸೇರಿದಂತೆ ಹಲವು ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೇ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಬುಧವಾರ ರಾತ್ರಿ 11:50ಕ್ಕೆ ಸೌದಿ ದೊರೆ ಸಲ್ಮಾನ್ ಭಾರತದಿಂದ ಹೊರಡಲಿದ್ದಾರೆ.