janadhvani

Kannada Online News Paper

ಶಬರಿಮಲೆ ಪ್ರವೇಶ: ಕೊನೆಗೂ ಸುಪ್ರೀಂ ತೀರ್ಪಿಗೆ ಬದ್ಧ ಎಂದ ದೇವಸ್ವಂ ಬೋರ್ಡ್

ನವದೆಹಲಿ: ಶಬರಿಮಲೆಗೆ ಎಲ್ಲ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿಗೆ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಬೆಂಬಲ ವ್ಯಕ್ತಪಡಿಸುವ ಮೂಲಕ ಬುಧವಾರ ತನ್ನ ನಿಲುವು ಬದಲಿಸಿಕೊಂಡಿದೆ.

ಕೇರಳ ಸರ್ಕಾರದ ಪ್ರತಿನಿಧಿಗಳನ್ನು ಒಳಗೊಂಡಿರುವ ತಿರುವಾಂಕೂರು ದೇವಸ್ವಂ ಮಂಡಳಿಯು, ’ಜೈವಿಕ ಲಕ್ಷಣಗಳ ಆಧಾರದ ಮೇಲೆ ಒಂದು ವರ್ಗದ ಜನರನ್ನು ಬೇರೆಯಾಗಿ ಕಾಣಬಾರದು’ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನ ಪೀಠದ ಮುಂದೆ ಅಭಿಪ್ರಾಯ ದಾಖಲಿಸಿತು.

2018ರ ಸೆಪ್ಟೆಂಬ್‌ 28ರಂದು ಸುಪ್ರೀಂ ಕೋರ್ಟ್‌ ನೀಡಿದ ಆದೇಶಕ್ಕೆ ಬದ್ಧರಾಗಿರುವುದಾಗಿ ಹೇಳಿದ ಕೇರಳ ಸರ್ಕಾರ, ತೀರ್ಪು ಮರುಪರಿಶೀಲನೆಗಾಗಿ ಸಲ್ಲಿಕೆಯಾದ ಅರ್ಜಿಗಳನ್ನು ವಜಾ ಮಾಡುವಂತೆ ಮನವಿ ಮಾಡಿತು.

’ಅನುಚ್ಛೇದ 25(1)ರಂತೆ ಧರ್ಮದ ಆಚರಣೆಯಲ್ಲಿ ಎಲ್ಲರಿಗೂ ಸಮಾನ ಅವಕಾಶವಿದೆ’ ಎಂಬುದನ್ನು ಟಿಡಿಪಿ ಪರವಾಗಿ ಹಿರಿಯ ವಕೀಲ ರಾಕೇಶ್‌ ದ್ವಿವೇದಿ, ನ್ಯಾಯಮೂರ್ತಿಗಳಾದ ಆರ್‌.ಎಫ್.ನರಿಮನ್‌, ಎ.ಎಂ. ಖಾನ್ವಿಲ್ಕರ್‌, ಡಿ.ವೈ. ಚಂದ್ರಚೂಡ್‌ ಮತ್ತು ಇಂದೂ ಮಲ್ಹೋತ್ರಾ ಅವರ‌ನ್ನು ಒಳಗೊಂಡ ನ್ಯಾಯಪೀಠದ ಮುಂದೆ ಪ್ರಸ್ತಾಪಿಸಿದರು.

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ಅವಕಾಶ ಕೊಡುವ ಸುಪ್ರೀಂ ಕೋರ್ಟ್‌ ತೀರ್ಪನ್ನು ಮರುಪರಿಶೀಲಿಸುವಂತೆ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆಯನ್ನು ಬುಧವಾರ ನಡೆಸಿದ ಸುಪ್ರೀಂ ಕೋರ್ಟ್‌, ತೀರ್ಪು ಕಾಯ್ದಿರಿಸಿದೆ.

error: Content is protected !! Not allowed copy content from janadhvani.com