ಬಂಟ್ವಾಳ :ಇಲ್ಲಿನ ಕೋಲ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಟ್ರುಕಲ ಪ್ರದೇಶದಲ್ಲಿ 40 ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ವೇಲಂಕಣಿ ಮಾತೆಯ ಗ್ರೋಟ್ಟೋವನ್ನು ಧ್ವಂಸ ಗೊಳಿಸಿದ ಘಟನೆ ಬೆಳಕಿಗೆ ಬಂದಿದೆ.ಸ್ಥಳಕ್ಕೆ ವಿಧಾನಪರಿಷತ್ ಶಾಸಕ ಶ್ರೀ ಐವನ್ ಡಿಸೋಜಾ ಭೇಟಿ ನೀಡಿ ಕಿಡಿಗೇಡಿಗಳ ಕೃತ್ಯ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಕೋಲ್ನಾಡು ಗ್ರಾಮ ಕುಂಟ್ರಕಲ ಪ್ರದೇಶದಲ್ಲಿ 40 ವರ್ಷಗಳ ಹಿಂದೆ ಸ್ಥಳೀಯ ಕ್ರೈಸ್ತ ಕುಟುಂಬದ ಯುವಕರು ದೂರದ ಚರ್ಚಿಗೆ ರಸ್ತೆ ಸಂಪರ್ಕವಿಲ್ಲದ ಕಾರಣ ಈ ಪ್ರದೇಶದಲ್ಲಿ ವೇಲಂಕಣಿ ಮಾತೆಯ ಗ್ರೋಟ್ಟೋವನ್ನು ಸ್ಥಾಪಿಸಿದ್ದರು. ಈ ಗ್ರೋಟ್ಟೋದಲ್ಲಿ ವರ್ಷಕ್ಕೆ 2-3 ಬಾರಿ ಹಬ್ಬದ ಸಂದರ್ಭದಲ್ಲಿ ಪರಿಸರದ ಕ್ರೈಸ್ತರು ಪ್ರಾರ್ಥನೆ ಸಲ್ಲಿಸುತ್ತಿದ್ದರು. ದಿನಾಂಕ 28.09.2018 ರಂದು ಕೆಲವು ಕಿಡಿಗೇಡಿಗಳು ಈ ಗ್ರೋಟ್ಟೋವನ್ನು ಸಂಪೂರ್ಣ ಕೆಡವಿ ಹಾಕಿ ಅಲ್ಲಿ ಇದ್ದ ವೆಲಂಕಣಿ ಮಾತೆಯ ಮೂರ್ತಿ ಮತ್ತು ಶಿಲುಬೆಯನ್ನು ಧ್ವಂಸಗೊಳಿಸಿ ಆ ಸ್ಥಳದಲ್ಲಿ ಕೇಸರಿ ಧ್ವಜವನ್ನು ಹಾಕಿ ಕ್ರೈಸ್ತ ಸಮುದಾಯದ ಭಾವನೆಗಳಿಗೆ ಕುಂದು ತರುವ ಕೆಲಸ ಮಾಡಿದ್ದು, ಮಾತ್ರವಲ್ಲದೆ ಶಾಂತಿ ಸೌಹಾರ್ದತೆಗೆ ಗಾಂಧಿ ಗ್ರಾಮವೆಂದೇ ಹೆಸರುವಾಸಿಯಾದ ಕೋಲ್ನಾಡು ಗ್ರಾಮದ ಸೌಹಾರ್ದತೆಯನ್ನು ಕೆಡಿಸಲು ಮುಂದಾಗಿದ್ದಾರೆ.ಯಾವುದೋ ದುರುದ್ದೇಶದಿಂದ ಈ ಕೃತ್ಯ ನಡೆಸಿದ್ದು, ಇದರ ಹಿಂದೆ ಸೌಹಾರ್ದತೆ ಕೆಡಿಸುವ ತಂತ್ರ ಇದ್ದಂತಿದೆ. ಈ ಬಗ್ಗೆ ತಕ್ಷಣ ಸೂಕ್ತ ತನಿಖೆ ನಡೆಸುವಂತೆ ಶ್ರೀ ಐವನ್ ಡಿಸೋಜಾ ರವರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಜಿಲ್ಲಾಡಳಿತಕ್ಕೆ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯ ಕ್ರೈಸ್ತ ಸಮುದಾಯದ ಆನೇಕ ನಾಯಕರು ಈ ಹಿಂದೆ ಇದ್ದ ವೇಲಂಕಣಿ ಮಾತೆಯ ಗ್ರೋಟ್ಟೋ ಪುನರ್ ಸ್ಥಾಪಿಸಲು ವಿನಂತಿಸಿದ್ದು , ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲು ಮತ್ತು ಆರೋಪಿಗಳನ್ನು ಬಂಧಿಸಲು ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ ಎಸ್ ಮಹಮ್ಮದ್ , ಕೋಲ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸುಬಾಷ್ ಚಂದ್ರ ಶೆಟ್ಟಿ ಉಪಾಧ್ಯಕ್ಷರಾದ ಶ್ರೀಮತಿ ಯಮುನಾ ಲಕ್ಷ್ಮಣಗೌಡ, ಪಂಚಾಯತ್ ಸದಸ್ಯರುಗಳಾದ ಪವಿತ್ರ ಪೂಂಜ, ಲೀನ ಡಿಸೋಜಾ, ಸ್ಥಳೀಯ ಮುಖಂಡರಾದ ಅಶ್ರಫ್, ಫೆಲಿಸ್ ಡಿಸೋಜಾ, ವೇಗಸ್ ಕಮ್ಮಜೆ, ಸತೀಶ್ ಕುದ್ರಿಯ, ಇತರರು ಉಪಸ್ಥಿತರಿದ್ದರು.