janadhvani

Kannada Online News Paper

ಸೌದಿ: ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಪೋಸ್ಟ್ ಮಾಡಿದ್ದಲ್ಲಿ 5ವರ್ಷ ಸೆರೆವಾಸ

ರಿಯಾದ್: ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಪೋಸ್ಟ್ ಮಾಡುವುದನ್ನುವಸೌದಿ ಅರೇಬಿಯಾ ನಿಷೇಧಿಸಿದೆ.

ಜನರ ಭದ್ರತೆ ಮತ್ತು ಶಾಂತಿಯನ್ನು ಸಂರಕ್ಷಣೆ ಮಾಡುವ ಸಲುವಾಗಿ ಸಾಮಾಜಿಕ ಮಾಧ್ಯಮದಲ್ಲಿ ವಿಡಂಬನಾತ್ಮಕ ಪ್ರಚಾರದ ಬಳಕೆ ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜನರೆಡೆಯಲ್ಲಿ ತಪ್ಪು ಸಂದೇಶವನ್ನು ಪ್ರಸಾರ ಮಾಡಲು ಮತ್ತು ಸಾರ್ವಜನಿಕ ಸೌಹಾರ್ದಕ್ಕೆ ಬೆದರಿಕೆಯಾಗುವ ರೀತಿಯಲ್ಲಿ ಸಾಮಾಜಿಕ ಮಾಧ್ಯಮವನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಈ ನಿಟ್ಟಿನಲ್ಲಿ ಫೇಸ್ಬುಕ್ ಸೇರಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಟ್ರಾಲ್ ಪ್ರಕಟಿಸುವುದನ್ನು ನಿಷೇಧಿಸಲಾಗಿದೆ.

ಕಾನೂನು ಉಲ್ಲಂಘಿಸುವವರಿಗೆ ಗರಿಷ್ಠ ಐದು ವರ್ಷಗಳ ಕಾಲ ಜೈಲು ಶಿಕ್ಷೆ ಲಭಿಸಲಿದೆ. ಅದರ ಹೊರತಾಗಿ 30 ಲಕ್ಷ ರಿಯಾಲ್ ವರೆಗೆ ದಂಡ ವಿಧಿಸಲು (ರೂ. 5.76 ಕೋಟಿ) ಕಾನೂನಿನಲ್ಲಿ ಅವಕಾಶವಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್ಚರಿಸಿದ್ದಾರೆ.
ಗೇಲಿ ಮಾಡುವುದು, ಅಣಕಗಳು, ಇತರರಿಗೆ ಕಿರುಕುಳ ಮುಂತಾದವುಗಳ ವಿರುದ್ಧ ತೀವ್ರವಾದ ಶಿಕ್ಷೆಗಳನ್ನು ಜಾರಿಮಾಡಲಾಗುತ್ತದೆ. ಇತರರಿಗೆ ಇಂತಹ ಪೋಸ್ಟ್ ಗಳನ್ನು ಫಾರ್ವರ್ಡ್ ಮಾಡುವುದು ಕೂಡ ಶಿಕ್ಷಾರ್ಹವಾಗಿದೆ.

ಧಾರ್ಮಿಕ ಮೌಲ್ಯಗಳ ಅಗೌರವ, ನೈತಿಕತೆಯ ವಿರುದ್ದ ಚಿತ್ರಗಳನ್ನು ಪೋಸ್ಟ್ ಮಾಡುವುದು, ತಪ್ಪು ಕಲ್ಪನೆಗಳನ್ನು ಉತ್ತೇಜಿಸುವುದು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿಗಳನ್ನು ಪೋಸ್ಟ್ ಮಾಡುವುದನ್ಬು ಸೈಬರ್ ಅಪರಾಧವಾಗಿ ಪರಿಗಣಿಸಲಾಗುವುದು ಎಂದು ಸಾರ್ವಜನಿಕ ಪ್ರಾಸಿಕ್ಯೂಟರ್ ಹೇಳಿದರು.

ದೇಶದಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು, ಈ ಬಗೆಗಿನ ಮಾಹಿತಿಯನ್ನು ಪೊಲೀಸರಿಗೆ ತಿಳಿಸಲು ಸಾರ್ವಜನಿಕರು ಸಿದ್ಧರಿರಬೇಕು ಎಂದು ಸಾರ್ವಜನಿಕ ಪ್ರಾಸಿಕ್ಯೂಟರ್ ಒತ್ತಾಯಿಸಿದರು.

error: Content is protected !! Not allowed copy content from janadhvani.com