ಬೆಂಗಳೂರು, ಜು.30:-ಬಡವರ ಹಸಿವು ನೀಗಿಸುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಇಂದಿರಾ ಕ್ಯಾಂಟೀನ್ಗಳ ಸಮಗ್ರ ಅಭಿವೃದ್ಧಿಗೆ ಹಾಗೂ ಅಲ್ಲಿನ ಲೋಪದೋಷಗಳನ್ನು ನಿವಾರಿಸಲು ಸರ್ವ ಪಕ್ಷಗಳ ಸಮಿತಿ ರಚಿಸಲಾಗುವುದು ಎಂದು ಮೇಯರ್ ಸಂಪತ್ ರಾಜ್ ಬಿಬಿಎಂಪಿ ಸಭೆಯಲ್ಲಿಂದು ಭರವಸೆ ನೀಡಿದ್ದಾರೆ.
ಸಭೆ ಆರಂಭಗೊಳ್ಳುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯ ಎಂ. ಶಿವರಾಜ್ ವಿಷಯ ಪ್ರಸ್ತಾಪಿಸಿ, ಇಂದಿರಾ ಕ್ಯಾಂಟೀನ್ಗೆ ಬಾಕಿ ಉಳಿಸಿಕೊಂಡಿರುವ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು. ಈ ಕ್ಯಾಂಟೀನ್ಗಳಲ್ಲಿ ಬಡವರು, ಕೂಲಿಕಾರ್ಮಿಕರು ತಮ್ಮ ಹಸಿವು ನೀಗಿಸಿಕೊಳ್ಳುತ್ತಿದ್ದಾರೆ. 40 ಕೋಟಿ ರೂ.ನಷ್ಟು ಹಣವನ್ನು ಬಾಕಿ ಉಳಿಸಿಕೊಂಡಿರುವುದು ಸರಿಯಲ್ಲ ಎಂದು ಹೇಳಿದರು.
ಇದಕ್ಕೆ ಧ್ವನಿಗೂಡಿಸಿದ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಇಂದಿರಾ ಕ್ಯಾಂಟೀನ್ನಲ್ಲಿ ಎಷ್ಟು ಜನ ಊಟ ಮಾಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ನೀಡಿ ಎಂದು ಒತ್ತಾಯಿಸಿ, ಕಡಿಮೆ ಜನ ಊಟ ಮಾಡುತ್ತಿದ್ದರೂ ಹೆಚ್ಚಿನ ಜನರ ಸಂಖ್ಯೆ ತೋರಿಸಿ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಇಂದಿರಾ ಕ್ಯಾಂಟೀನ್ನ ಜನಪ್ರಿಯತೆಗೆ ನಾವು ಮರುಕಪಡುತ್ತಿಲ್ಲ. ಬೇಕಾದರೆ ಇನ್ನೂ ಯೋಜನೆಯನ್ನು ವಿಸ್ತರಿಸಿ, ಆದರೆ ಬಡವರ ಊಟದ ವಿಷಯದಲ್ಲಿ ಅವ್ಯವಹಾರವಾಗುವುದನ್ನು ಸಹಿಸುವುದಿಲ್ಲ ಎಂದು ಹೇಳಿದರು.
ಬಿಜೆಪಿಯ ಉಮೇಶ್ ಶೆಟ್ಟಿ ಮಾತನಾಡಿ, ಪ್ರತಿ ಕ್ಯಾಂಟೀನ್ನಲ್ಲಿ ಶೇಕಡಾ 10ರಷ್ಟು ಆಹಾರ ಪೊಲಾಗುತ್ತಿದೆ. ಇದನ್ನು ಹೋಗಲಾಡಿಸಿದರೆ ಇನ್ನಷ್ಟು ಬಡವರಿಗೆ ಊಟ ನೀಡಬಹುದು ಎಂದು ಸಲಹೆ ನೀಡಿದರು. ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಉತ್ತರ ನೀಡಿ, ಇಂದಿರಾ ಕ್ಯಾಂಟೀನ್ ಜಗತ್ಪ್ರಸಿದ್ದಿಯಾಗಿದೆ. ಜರ್ಮನ್ನ ಟಿವಿ ಚಾನೆಲ್ನಲ್ಲಿ ಇಂದಿರಾ ಕ್ಯಾಂಟೀನ್ ಕುರಿತು ಸಾಕ್ಷ್ಯ ಚಿತ್ರವೊಂದನ್ನು ಪ್ರದರ್ಶಿಸಲಾಗಿದೆ.
ಇದರಲ್ಲಿ ಇಂದಿರಾ ಕ್ಯಾಂಟೀನ್ ಅನ್ನು ವಿಶ್ವದ ಅತ್ಯುತ್ತಮ ಕ್ಯಾಂಟೀನ್ ಎಂದು ಬಣ್ಣಿಸಲಾಗಿದೆ. ಇದುವರೆಗೆ 6 ಕೋಟಿ ಜನರು ಇದುವರೆಗೆ ಊಟ ಮಾಡಿದ್ದಾರೆ. ಸ್ವಚ್ಛತೆ ಹಾಗೂ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡಿದ್ದೇವೆ. ಪ್ರತಿ ಕಿಚನ್ ಹಾಗೂ ಕ್ಯಾಂಟೀನ್ನಲ್ಲಿ ನಿವೃತ್ತ ಸೇನಾ ಅಧಿಕಾರಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಕ್ಯಾಂಟೀನ್ ಮತ್ತು ಕಿಚನ್ ನಿರ್ವಹಣೆಗೆ ಸರ್ಕಾರವೇ ಹಣ ನೀಡುತ್ತಿದೆ. ಕ್ಯಾಂಟೀನ್ಗೆ ಎಲ್ಲ ರೀತಿಯ ನೆರವು ನೀಡಲಾಗುವುದು ಹಾಗೂ ಅಲ್ಲಿರುವ ಎಲ್ಲ ಲೋಪದೋಷಗಳನ್ನು ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ಮಾತು ಮುಂದುವರಿಸಿದ ಶಿವರಾಜ್, ಇಂದಿರಾ ಕ್ಯಾಂಟೀನ್ಗಳನ್ನು ಮೇಲ್ದರ್ಜೆಗೇರಿಸಬೇಕು, ಬಾಕಿ ಇರುವ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಸದಸ್ಯರ ಸಲಹೆ ಸೂಚನೆಗಳನ್ನು ಆಲಿಸಿದ ನಂತರ ಪ್ರತಿಕ್ರಿಯಿಸಿದ ಮೇಯರ್ ಸಂಪತ್ರಾಜ್, ಕ್ಯಾಂಟೀನ್ನ ಸಮಗ್ರ ಅಭಿವೃದ್ಧಿಗೆ ಹಾಗೂ ಲೋಪದೋಷಗಳನ್ನು ಸರಿಪಡಿಸಲು ಸರ್ವ ಪಕ್ಷ ಸಮಿತಿಯನ್ನು ರಚಿಸಲಾಗುವುದು. ಒಂದು ತಿಂಗಳಲ್ಲಿ ಈ ಸಮಿತಿ ವರದಿ ನೀಡಲಿದೆ. ವರದಿ ಬಂದ ಬಳಿಕ ಅದರ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.