janadhvani

Kannada Online News Paper

‘ಪೈಲಟ್ ಸ್ಮಿತ್ ಮಚ್ಚಾರ್ ಯುಎಇಯ ಹೆಮ್ಮೆ’ ; ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ ಶೈಖ್ ಹಮ್ದಾನ್

ದುಬೈ: ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಯುಎಇಯ ಹೆಮ್ಮೆ ಎಂದು ದುಬೈ ಉತ್ತರಾಧಿಕಾರಿ ಹಾಗೂ ಉಪಪ್ರಧಾನಿ ಮತ್ತು ರಕ್ಷಣಾ ಸಚಿವ ಶೈಖ್ ಹಮ್ದಾನ್ ಬಿನ್ ಮುಹಮ್ಮದ್ ಬಿನ್ ರಾಶಿದ್ ಆಲ್ ಮಕ್ತೂಮ್ ಹೇಳಿದ್ದಾರೆ. ಪ್ರೀತಿಯ ಮತ್ತು ಶಾಂತಿಯ ನಾಡಾಗಿರುವ ಯುಎಇಯ ಇತಿಹಾಸದ ಭಾಗವಾಗಿರುವ ವ್ಯಕ್ತಿ ಸ್ಮಿತ್ ಮಚ್ಚಾರ್ ಎಂದು ಅವರು ಅಭಿಪ್ರಾಯಪಟ್ಟರು.

ಫ್ಲೈದುಬೈ ವಿಮಾನದಲ್ಲಿ ನಡೆದ ಗಂಭೀರ ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ಮಿತ್ ಮಚಾರ್ ಅವರನ್ನು ಶೈಖ್ ಹಮ್ದಾನ್ ನೇರವಾಗಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಗಂಭೀರವಾಗಿ ಗಾಯಗೊಂಡಿದ್ದರೂ ಪ್ರಯಾಣಿಕರ ಜೀವ ಉಳಿಸಲು ಹಾಗೂ ದೊಡ್ಡ ದುರಂತವನ್ನು ತಪ್ಪಿಸಲು ಧೈರ್ಯದಿಂದ ಹೋರಾಡಿದ ಪೈಲಟ್‌ನ ಜವಾಬ್ದಾರಿತನ ಮತ್ತು ಸಾಹಸವನ್ನು ಅವರು ಶ್ಲಾಘಿಸಿದರು. ದುಬೈ ಸಿವಿಲ್ ಏವಿಯೇಷನ್ ಅಥಾರಿಟಿಯ ಅಧ್ಯಕ್ಷ ಹಾಗೂ ಎಮಿರೇಟ್ಸ್ ಗ್ರೂಪ್ ಅಧ್ಯಕ್ಷ ಶೈಖ್ ಅಹ್ಮದ್ ಬಿನ್ ಸಯೀದ್ ಅಲ್ ಮಕ್ತೂಮ್ ಕೂಡ ಭೇಟಿಯ ವೇಳೆ ಉಪಸ್ಥಿತರಿದ್ದರು.

ಸೆಪ್ಟೆಂಬರ್ 30ರಂದು ದುಬೈಯಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ FZ1073 ವಿಮಾನದಲ್ಲಿ ಈ ಘಟನೆ ನಡೆದಿತ್ತು. ಬಳಿಕ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್‌ಗೆ ತಿರುಗಿಸಲಾಗಿತ್ತು. ವಿಮಾನದ ಕಾಕ್‌ಪಿಟ್‌ನಲ್ಲಿ ಸಹಪೈಲಟ್ ಕ್ರ್ಯಾಶ್ ಆಕ್ಸ್ ಬಳಸಿ ಕ್ಯಾಪ್ಟನ್ ಸ್ಮಿತ್ ಮಚಾರ್ ಮೇಲೆ ದಾಳಿ ಮಾಡಿ, ವಿಮಾನದ ಸಂಪೂರ್ಣ ನಿಯಂತ್ರಣವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದ್ದ ಎಂದು ವರದಿಯಾಗಿದೆ.

ವಿಮಾನದಲ್ಲಿನ ಘಟನೆ ಸಹಪೈಲಟ್‌ನ ಭಯೋತ್ಪಾದಕ ದಾಳಿಯ ಪ್ರಯತ್ನವಾಗಿತ್ತು ಎಂದು ಯುಎಇ ಅಧಿಕಾರಿಗಳು ಅಧಿಕೃತವಾಗಿ ದೃಢಪಡಿಸಿದ್ದಾರೆ. ಭಯೋತ್ಪಾದನೆಯ ವಿರುದ್ಧ ಹೋರಾಟ ಹಾಗೂ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸುವಲ್ಲಿ ಕ್ಯಾಪ್ಟನ್ ಸ್ಮಿತ್ ಮಚಾರ್ ತೋರಿದ ಧೈರ್ಯಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಯುಎಇ ಅಧ್ಯಕ್ಷರ ರಾಜತಾಂತ್ರಿಕ ಸಲಹೆಗಾರ ಅನ್ವರ್ ಗರ್ಗಾಶ್ ಅವರು ಪೈಲಟ್‌ನ ವೃತ್ತಿಪರತೆ ಮತ್ತು ನೈತಿಕ ಪ್ರಜ್ಞೆಯನ್ನು ಶ್ಲಾಘಿಸಿದ್ದಾರೆ. ಸ್ಮಿತ್ ಮಚಾರ್ ನಿಜವಾದ ಹೀರೋ ಎಂದು ಅವರು ಹೇಳಿದ್ದಾರೆ. ಘಟನೆಯನ್ನು ಲಘುವಾಗಿ ಪರಿಗಣಿಸಬಾರದು ಹಾಗೂ ಪಿತೂರಿ ಸಿದ್ಧಾಂತಗಳ ಹಿಂದೆ ಹೋಗಬಾರದು ಎಂದು ಅವರು ಎಚ್ಚರಿಸಿದ್ದಾರೆ. ಭಯೋತ್ಪಾದನೆ ಮತ್ತು ದ್ವೇಷ ಭಾಷಣದ ವಿರುದ್ಧ ನಿರಂತರ ಜಾಗರೂಕತೆ ಅಗತ್ಯವಿದೆ ಎಂದೂ ಅವರು ಹೇಳಿದ್ದಾರೆ.

ಕಠಿಣ ಪರಿಸ್ಥಿತಿಯ ನಡುವೆಯೂ ವಿಮಾನವನ್ನು ಸುರಕ್ಷಿತವಾಗಿ ನೆಲಕ್ಕಿಳಿಸಲು ಸಹಕರಿಸಿದ ವಿಮಾನ ಸಿಬ್ಬಂದಿ ಹಾಗೂ ಪ್ರಯಾಣಿಕರಿಗೆ ಫ್ಲೈದುಬೈ ಸಿಇಒ ಗೈತ್ ಅಲ್ ಗೈತ್ ಧನ್ಯವಾದ ತಿಳಿಸಿದ್ದಾರೆ ಮತ್ತು ಅಗತ್ಯವಿರುವ ಎಲ್ಲ ನೆರವನ್ನು ಒದಗಿಸುವುದಾಗಿ ಭರವಸೆ ನೀಡಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ಸ್ಮಿತ್ ಮಚಾರ್ ಅವರನ್ನು ‘ಹೀರೋ’ ಎಂದು ಕರೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದರೂ ನೂರಾರು ಪ್ರಯಾಣಿಕರ ಜೀವ ಉಳಿಸಲು ಅವರು ತೋರಿದ ಅಚಲ ನಿಶ್ಚಯ ಭಾರತಕ್ಕೆ ಹೆಮ್ಮೆ ತಂದಿದೆ ಎಂದು ಮೋದಿ ಹೇಳಿದ್ದಾರೆ. ಸ್ಮಿತ್ ಮಚಾರ್ ಶೀಘ್ರ ಗುಣಮುಖರಾಗಲಿ ಎಂದು ಅವರು ಹಾರೈಸಿದ್ದಾರೆ.

ಇದನ್ನೂ ಓದಿರಿ...