janadhvani

Kannada Online News Paper

ಮಳೆ ಅಡ್ಡಿ: ಶಿರಾಡಿ ಘಾಟಿ ಸಂಚಾರಕ್ಕೆ ಮುಕ್ತಗೊಳಿಸಲು ವಿಳಂಬ

ಮಂಗಳೂರು: ಶಿರಾಡಿ ಘಾಟಿ ರಸ್ತೆಯ ಅಂತಿಮ ಹಂತದ ಕಾಮಗಾರಿಗೆ ಮಳೆ ಅಡ್ಡಿಯಾಗಿದ್ದು, ಈ ಮಾರ್ಗವನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸುವ ವಿಚಾರದಲ್ಲಿ ಲೋಕೋಪಯೋಗಿ ಇಲಾಖೆ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಹೀಗಾಗಿ ವಾಹನ ಸಂಚಾರ ಆರಂಭ ಇನ್ನೂ ಕೆಲವು ದಿನಗಳ ಕಾಲ ವಿಳಂಬವಾಗಲಿದೆ.

ಜೂನ್‌ 30ರಂದು ಎರಡನೇ ಹಂತದ ಕಾಂಕ್ರೀಟ್‌ ರಸ್ತೆ ನಿರ್ಮಾಣ ಕೆಲಸ ಪೂರ್ಣಗೊಂಡಿತ್ತು. 15 ದಿನಗಳ ಕ್ಯೂರಿಂಗ್‌ ಬಳಿಕ ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲು ತೀರ್ಮಾನಿಸಲಾಗಿತ್ತು. ನಿಗದಿಯಂತೆ ಜುಲೈ 15ಕ್ಕೆ ವಾಹನ ಸಂಚಾರ ಆರಂಭವಾಗಬೇಕಿತ್ತು. ಆದರೆ, ರಸ್ತೆ ಬದಿಯನ್ನು ಸಜ್ಜುಗೊಳಿಸುವ ಕೆಲಸಕ್ಕೆ ಮಳೆ ಅಡ್ಡಿಯಾಗಿದೆ.

ಈ ಮಾರ್ಗದಲ್ಲಿ ವಾಹನ ಸಂಚಾರ ಆರಂಭಿಸುವ ಕುರಿತು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಸೋಮವಾರ ಬೆಂಗಳೂರಿನಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು. ಆದರೆ, ರಸ್ತೆ ಬದಿಯನ್ನು (ಶೋಲ್ಡರ್‌) ಸಜ್ಜುುಗೊಳಿಸುವ ಕೆಲಸ ಮುಗಿಯದೇ ವಾಹನ ಸಂಚಾರ ಆರಂಭಿಸಿದರೆ ಅವಘಡಗಳು ಸಂಭವಿಸಬಹುದು ಎಂಬ ಆತಂಕವನ್ನು ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳು ಮುಂದಿಟ್ಟಿದ್ದಾರೆ. ಈ ಕಾರಣದಿಂದ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಈ ಕುರಿತು ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ಮುಖ್ಯ ಎಂಜಿನಿಯರ್‌ ಗಣೇಶ್, ‘ಶಿರಾಡಿ ಘಾಟಿಯಲ್ಲಿ ಒಂದು ವಾರದಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ಹೀಗಾಗಿ ಶೋಲ್ಡರ್ ಕಾಮಗಾರಿಗೆ ಅಡ್ಡಿಯಾಗಿದೆ. ಶೋಲ್ಡರ್‌ ಕೆಲಸ ಮುಗಿಯದೇ ವಾಹನ ಸಂಚಾರ ಆರಂಭಿಸಿದರೆ ಬದಿಯಲ್ಲಿ ಹೋದ ವಾಹನಗಳು ಮಣ್ಣಿನಲ್ಲಿ ಸಿಲುಕಿಕೊಳ್ಳುವ ಅಪಾಯವಿದೆ. ಈ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಜಿಲ್ಲಾಧಿಕಾರಿಯವರಿಂದ ವರದಿ ಪಡೆದ ಬಳಿಕವೇ ದಿನಾಂಕ ನಿಗದಿ ಮಾಡಲು ಸಚಿವರು ನಿರ್ಧರಿಸಿದ್ದಾರೆ’ ಎಂದರು.

ಜಿಲ್ಲಾಧಿಕಾರಿ ಭೇಟಿ

ಲೋಕೋಪಯೋಗಿ ಸಚಿವರ ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ ಸೋಮವಾರ ಶಿರಾಡಿ ಘಾಟಿಗೆ ಭೇಟಿನೀಡಿ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದರು. ಘಾಟಿಯುದ್ದಕ್ಕೂ ಸಂಚರಿಸಿದ ಜಿಲ್ಲಾಧಿಕಾರಿ ವಾಹನ ಸಂಚಾರ ಆರಂಭಕ್ಕೂ ಮುನ್ನ ಆಗಬೇಕಿರುವ ಕೆಲಸಗಳ ಪಟ್ಟಿ ಮಾಡಿದ್ದಾರೆ. ವಾಸ್ತವಿಕ ಸ್ಥಿತಿ ಕುರಿತು ವರದಿಯೊಂದನ್ನು ಸಿದ್ಧಪಡಿಸಿದ್ದಾರೆ. ‘ನಾನು ಖುದ್ದಾಗಿ ರಸ್ತೆ ಪರಿಶೀಲನೆ ಮಾಡಿದ್ದೇನೆ. ಮಳೆಯಿಂದ ಕೆಲಸ ತಡವಾಗುತ್ತಿದೆ. ಜುಲೈ 15ಕ್ಕೆ ವಾಹನ ಸಂಚಾರ ಆರಂಭಿಸಬೇಕೆಂಬ ಆಶಯದಿಂದ ಎಲ್ಲರೂ ಪ್ರಯತ್ನಿಸುತ್ತಿದ್ದೇವೆ. ಆದರೆ, ಮಳೆ ಕಡಿಮೆ ಆಗದಿದ್ದರೆ ಕಾಮಗಾರಿ ಮುಗಿಯುವಾಗ ಸ್ವಲ್ಪ ವಿಳಂಬ ಆಗಬಹುದು. ಯಾವುದೇ ರೀತಿಯ ಅವಘಡಗಳಿಗೆ ಅವಕಾಶವಾಗದ ರೀತಿಯಲ್ಲಿ ರಸ್ತೆಯನ್ನು ಸಜ್ಜುಗೊಳಿಸಿ, ವಾಹನ ಸಂಚಾರಕ್ಕೆ ಅವಕಾಶ ನೀಡಬೇಕಿದೆ’ ಎಂದರು.

error: Content is protected !! Not allowed copy content from janadhvani.com