janadhvani

Kannada Online News Paper

ಖುರ್‌ಆನ್ ಸುಟ್ಟು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದ ವ್ಯಕ್ತಿ ಗುಂಡೇಟಿನಲ್ಲಿ ಸಾವು

ಜನಾಂಗೀಯ ಹಿಂಸಾಚಾರ ಪ್ರಚೋದನೆಯಲ್ಲಿ ದೋಷಿಯೇ ಎಂಬ ಕುರಿತು ಗುರುವಾರ ಸ್ಟಾಕ್ ಹಾಮ್ ನ್ಯಾಯಾಲಯವೊಂದು ತೀರ್ಪು ನೀಡುವುದಿತ್ತು.

ಸ್ಟಾಕ್ ಹಾಮ್: 2023ರಲ್ಲಿ ಸ್ವೀಡನ್‌ನಲ್ಲಿ ಇಸ್ಲಾಂ ಪವಿತ್ರಗ್ರಂಥವಾದ ಖುರ್‌ಆನ್ ಅನ್ನು ಸುಡುವ ಮೂಲಕ ಸ್ವೀಡನ್ ಮಾತ್ರವಲ್ಲದೆ, ವಿಶ್ವಾದ್ಯಾಂತ ಮುಸ್ಲಿಂ ರಾಷ್ಟ್ರಗಳು ಸಹಿತ ಮಸ್ಲಿಮ್ ಸಮುದಾಯದ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದ ಸಲ್ವಾನ್ ಮೋಮಿಕಾನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.

ಖುರ್‌ಆನ್ ಅನ್ನು ಸುಡುವ ಮೂಲಕ ಭಾರಿ ಪ್ರತಿಭಟನೆಗೆ ಕಾರಣವಾಗಿದ್ದ ಕ್ರಿಶ್ಚಿಯನ್ ಸಮುದಾಯದ ಸಲ್ವಾನ್ ಮೋಮಿಕಾ ಜನಾಂಗೀಯ ಹಿಂಸಾಚಾರ ಪ್ರಚೋದನೆಯಲ್ಲಿ ದೋಷಿಯೇ ಎಂಬ ಕುರಿತು ಗುರುವಾರ ಸ್ಟಾಕ್ ಹಾಮ್ ನ್ಯಾಯಾಲಯವೊಂದು ತೀರ್ಪು ನೀಡುವುದಿತ್ತು.ಆದರೆ, “ಸಲ್ವಾನ್ ಮೋಮಿಕಾ ಮೃತಪಟ್ಟಿರುವುದರಿಂದ, ತೀರ್ಪು ನೀಡಲು ಇನ್ನೂ ಸಾಕಷ್ಟು ಸಮಯಾವಕಾಶ ಬೇಕಿರುವುದರಿಂದ, ತೀರ್ಪನ್ನು ಫೆಬ್ರವರಿ 3ರವರೆಗೆ ಮುಂದೂಡಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ಮೋಮಿಕಾ ವಾಸಿಸುತ್ತಿದ್ದ ಸೊಡರ್ ತಾಳ್ಮೆ ನಗರದಲ್ಲಿ ಗುಂಡಿನ ದಾಳಿ ನಡೆದಿದೆ ಎಂಬ ಮಾಹಿತಿಯನ್ನು ನಾವು ಸ್ವೀಕರಿಸಿದೆವು ಎಂದು ಪ್ರಕಟನೆಯಲ್ಲಿ ಪೊಲೀಸರು ತಿಳಿಸಿದ್ದಾರೆ.

“ಮನೆಯೊಳಗೆ ಗುಂಡಿನ ದಾಳಿ ನಡೆದಿದ್ದು, ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಗುಂಡೇಟಿಗೆ ಗುರಿಯಾಗಿರುವ ವ್ಯಕ್ತಿಯೊಬ್ಬ ಕಂಡು ಬಂದಿದ್ದಾನೆ. ಆತನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು” ಎಂದು ಪೊಲೀಸ್‌ ಪ್ರಕಟನೆಯಲ್ಲಿ ಹೇಳಲಾಗಿದೆ.

ಸಲ್ವಾನ್‌ ಮೊಮಿಕಾ ಯಾರು?

38 ವರ್ಷದ ಸಲ್ವಾನ್ ಮೊಮಿಕಾ ಇರಾಕ್ ಮೂಲದ ನಿರಾಶ್ರಿತನಾಗಿದ್ದು, ಸ್ವೀಡನ್‌ನಲ್ಲಿ ಹಲವಾರು ಬಾರಿ ಇಸ್ಲಾಂನ ಪವಿತ್ರ ಗ್ರಂಥವನ್ನು ಸುಟ್ಟುಹಾಕಿ ಅಪವಿತ್ರಗೊಳಿಸಿದ ಆರೋಪ ಈತನ ಮೇಲಿದೆ. ಇದಾದ ನಂತರ ಜನಾಂಗೀಯ ಸಮುದಾಯಗಳ ವಿರುದ್ಧ ಪ್ರಚೋದನೆ ಮಾಡಿದ ಆರೋಪದ ಮೇಲೆ ಸ್ವೀಡಿಷ್ ಅಧಿಕಾರಿಗಳಿಂದ ಸಲ್ವಾನ್‌ ಮೊಮಿಕಾ ತನಿಖೆಗೆ ಒಳಗಾಗಿದ್ದ.