janadhvani

Kannada Online News Paper

ಗೇಟ್ ವೇ ಆಫ್ ಇಂಡಿಯಾ: ದೋಣಿ ದುರಂತದಲ್ಲಿ 13 ಮಂದಿ ಮೃತ್ಯು

ಪ್ರಧಾನಿ ನರೇಂದ್ರ ಮೋದಿ ಅವರು ದೋಣಿ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.

ಮಹಾರಾಷ್ಟ್ರ: ಮುಂಬೈ ಕರಾವಳಿಯಲ್ಲಿ ವೇಗವಾಗಿ ಚಲಿಸುತ್ತಿದ್ದ ನೌಕಾಪಡೆಯ ಗಸ್ತು ದೋಣಿಯೊಂದು ಪ್ರವಾಸಿಗರಿದ್ದ ಮತ್ತೊಂದು ದೋಣಿಗೆ ಬುಧವಾರ (ಡಿ.18) ಡಿಕ್ಕಿ ಹೊಡೆದ ಪರಿಣಾಮ 13 ಮಂದಿ ಮೃತಪಟ್ಟಿದ್ದು, 101 ಜನರನ್ನು ರಕ್ಷಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ದೋಣಿ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ. ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ.

ನೀಲಕಮಲ್ ಎಂಬ ಪ್ರವಾಸಿಗರ ದೋಣಿಯು ಗೇಟ್ ವೇ ಆಫ್ ಇಂಡಿಯಾದ ಪ್ರಸಿದ್ದ ಪ್ರವಾಸಿ ತಾಣ ಎಲಿಫಂಟಾ ಗುಹೆಗಳತ್ತ ಸಾಗುತ್ತಿದ್ದಾಗ ಜವಾಹರ್ ದ್ವೀಪದ (ಬಚರ್ ಐಲ್ಯಾಂಡ್) ಬಳಿ ದುರಂತ ಸಂಭವಿಸಿದೆ.

ಈ ಕುರಿತು ನಾಗ್ಪುರದಲ್ಲಿ ಮಾಹಿತಿ ನೀಡಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ “ಮೃತಪಟ್ಟ 13 ಜನರಲ್ಲಿ 10 ಮಂದಿ ಪ್ರವಾಸಿಗರು ಮತ್ತು ಮೂವರು ನೌಕಾಪಡೆ ಸಿಬ್ಬಂದಿ ಇದ್ದಾರೆ” ಎಂದು ತಿಳಿಸಿದ್ದಾರೆ.

ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಈ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಸಂಜೆ 4 ಗಂಟೆಯ ಹೊತ್ತಿಗೆ ದುರಂತ ಸಂಭವಿಸಿದೆ. ರಕ್ಷಣಾ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಹೆಚ್ಚಿನ ಪ್ರಾಣ ಹಾನಿಯನ್ನು ತಡೆದಿದ್ದಾರೆ ಎಂದು ಫಡ್ನವಿಸ್ ಮಾಹಿತಿ ನೀಡಿದ್ದಾರೆ.

ದುರಂತ ನಡೆದಾಗ ಪ್ರವಾಸಿಗರ ದೋಣಿಯಲ್ಲಿ 110ಕ್ಕೂ ಹೆಚ್ಚು ಪ್ರಯಾಣಿಕರು ಮತ್ತು ಐವರು ಸಿಬ್ಬಂದಿ ಇದ್ದರು ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

error: Content is protected !! Not allowed copy content from janadhvani.com