janadhvani

Kannada Online News Paper

ಅಕ್ಟೋಬರ್ 4,5,6,: ತಾಜುಲ್ ಉಲಮಾ ಉರೂಸ್- ಯಶಸ್ವಿಗೆ ಎಸ್ ವೈ ಎಸ್ ಕರೆ

ಉಳ್ಳಾಲ ಪ್ರದೇಶಕ್ಕೆ ಧಾರ್ಮಿಕ ಸೇವೆ ಮತ್ತು ಶೈಕ್ಷಣಿಕ ಸೇವೆಗಾಗಿ ಆಗಮಿಸಿದ್ದ ತಂಙಳ್ ರವರು ಬಳಿಕ ನಾಡಿನ ಉದ್ದಗಲಕ್ಕೂ ತಮ್ಮ ಸೇವೆಯನ್ನು ವಿಸ್ತರಿಸಿದ್ದರು.

ಮಂಗಳೂರು: ತಮ್ಮ ಪುರುಷಾಯುಷ್ಯವನ್ನಿಡೀ ನಾಡಿನ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಮುಡಿಪಾಗಿಟ್ಟು ದಶಕದ ಹಿಂದೆ ನಮ್ಮನ್ನಗಲಿದ ಆಧ್ಯಾತ್ಮ ಗುರು ತಾಜುಲ್ ಉಲಮಾ ಅಸ್ಸಯ್ಯಿದ್ ಅಬ್ದುಲ್ ರಹ್ಮಾನ್ ಅಲ್ ಬುಖಾರಿ ಉಳ್ಳಾಲ ತಂಙಳ್ ರವರ ಹನ್ನೊಂದನೇ ಉರೂಸ್ ಮುಬಾರಕ್ ಅಕ್ಟೋಬರ್ 4,5,6 ದಿನಾಂಕಗಳಲ್ಲಿ ಕೇರಳದ ಕಣ್ಣೂರು ಜಿಲ್ಲೆಯ ಎಟ್ಟಿಕುಳಂ ನಲ್ಲಿರುವ ಸಮಾಧಿ ಸ್ಥಳದಲ್ಲಿ ನಡೆಯಲಿದೆ. ಈ ಸಮಾರಂಭವನ್ನು ಸಂಪೂರ್ಣ ಯಶಸ್ವಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ಸುನ್ನೀ ಯುವ ಜನ ಸಂಘ ಎಸ್ ವೈ ಎಸ್ ಕರೆ ನೀಡಿದೆ.

ಕೇರಳ ಮತ್ತು ತಮಿಳುನಾಡುಗಳಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ ತಮ್ಮ 30ನೇ ವರ್ಷದಲ್ಲಿ ಕರಾವಳಿ ಕರ್ನಾಟಕದ ಉಳ್ಳಾಲ ಪ್ರದೇಶಕ್ಕೆ ಧಾರ್ಮಿಕ ಸೇವೆ ಮತ್ತು ಶೈಕ್ಷಣಿಕ ಸೇವೆಗಾಗಿ ಆಗಮಿಸಿದ್ದ ತಂಙಳ್ ರವರು ಬಳಿಕ ನಾಡಿನ ಉದ್ದಗಲಕ್ಕೂ ತಮ್ಮ ಸೇವೆಯನ್ನು ವಿಸ್ತರಿಸಿದ್ದರು.

ಉಳ್ಳಾಲದಲ್ಲಿ ಮುದರ್ರಿಸ್ ಆಗಿ ಬಳಿಕ ಖಾಝಿಯಾಗಿ ಸೇವೆ ಸಲ್ಲಿಸಿದ ಅವರು ಉಳ್ಳಾಲ ಎಂಬ ಧಾರ್ಮಿಕ ಕೇಂದ್ರವನ್ನು ಕೇವಲ ಧರ್ಮಾಚರಣೆಗೆ ಮಾತ್ರ ಸೀಮಿತಗೊಳಿಸದೆ ಹಲವಾರು ಶಾಲಾ ಕಾಲೇಜು ಗಳನ್ನು ವಿವಿಧ ವಿದ್ಯಾಭ್ಯಾಸ ಕೇಂದ್ರಗಳನ್ನು ಸ್ಥಾಪಿಸಿ ಸಮಾಜದ ಅಭಿವೃದ್ಧಿಗಾಗಿ ನಾನಾ ವಿಧದ ಶೈಕ್ಷಣಿಕ ಯೋಜನೆಗಳನ್ನು ಹಮ್ಮಿಕೊಂಡು ಯಶಸ್ಸುಗೊಳಿಸಿದ್ದರು.

ಕರ್ನಾಟಕ ಮತ್ತು ಕೇರಳದ ನೂರಾರು ಮೊಹಲ್ಲಾ ಗಳ ಖಾಝಿಯಾಗಿ ಸೇವೆ ಸಲ್ಲಿಸಿದ್ದ ಅವರು ದೇಶ ವಿದೇಶಗಳಲ್ಲಿ ಪ್ರವಚನಗಳನ್ನು ಹಮ್ಮಿಕೊಂಡು ಸಮಾಜದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಜಾಗೃತಿಯನ್ನು ಮೂಡಿಸುವಲ್ಲಿ ತೀವ್ರ ಪ್ರಯತ್ನ ನಡೆಸಿದ್ದರು.

ಎಲ್ಲಾ ಧರ್ಮೀಯರನ್ನು
ಜಾತಿ ಮತ ಭೇದವಿಲ್ಲದೆ ಸಮಾನವಾಗಿ ಕಾಣುತ್ತಿದ್ದ ಮತ್ತು ಎಲ್ಲರಿಂದಲೂ ಗೌರವಾದರಗಳನ್ನು ಪಡೆಯುತ್ತಿದ್ದ ತಾಜುಲ್ ಉಲಮಾರವರು ಕೋಮು ಸೌಹಾರ್ದತೆಯನ್ನು ಬಲಿಷ್ಠಗೊಳಿಸವಲ್ಲಿಯೂ ಬಹಳಷ್ಟು ಪ್ರಯತ್ನಿಸಿದ್ದರು.
ತಾಜುಲ್ ಉಲಮಾ ಉರೂಸ್ ಸಮಾರಂಭವು ಮೂರು ದಿನಗಳಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಸಮಾಜ ಬಾಂಧವರು,ಸಂಘಟನಾ ಕಾರ್ಯಕರ್ತರು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಎಸ್ ವೈ ಎಸ್ ರಾಜ್ಯ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ಕರೆ ನೀಡಿದೆ.

error: Content is protected !! Not allowed copy content from janadhvani.com