ರಿಯಾದ್: ಇಂದು ಸೌದಿ ಅರೇಬಿಯಾದ 94ನೇ ರಾಷ್ಟ್ರೀಯ ದಿನಾಚರಣೆ.ರಾಷ್ಟ್ರದ ಸಂಸ್ಥಾಪಕ ದೊರೆ ಅಬ್ದುಲ್ ಅಝೀಝ್ ಅವರು 1932 ರಲ್ಲಿ, ಆಧುನಿಕ ಸೌದಿ ಅರೇಬಿಯಾವನ್ನು ನಜ್ದ್ ಹಿಜಾಝ್ ಎಂದು ಕರೆಯಲ್ಪಡುವ ಪ್ರದೇಶದ ವಿವಿಧ ಸಂಸ್ಥಾನಗಳನ್ನು ಸಂಯೋಜಿಸುವ ಮೂಲಕ ಏಕೀಕರಿಸಿದರು. ಇದರ ನೆನಪಿಗಾಗಿ ರಾಷ್ಟ್ರೀಯ ದಿನವನ್ನು ಸೆಪ್ಟೆಂಬರ್ 23 ರಂದು ಆಚರಿಸಲಾಗುತ್ತದೆ.
ದೇಶದೆಲ್ಲೆಡೆ ವಿಜೃಂಭಣೆಯ ಆಚರಣೆಗಳು ಆರಂಭಗೊಂಡಿದೆ.ಇದೇ ತಿಂಗಳ 18ರಂದು ಆರಂಭವಾದ ಆಚರಣೆ ಅಕ್ಟೋಬರ್ 2ರವರೆಗೆ ನಡೆಯಲಿದೆ. ದೇಶದ ಬೆಳವಣಿಗೆ ಮತ್ತು ಪ್ರಗತಿಯನ್ನು ಗುರುತಿಸಲು ಆಚರಣೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸ್ವದೇಶಿಗಳ ಜತೆಗೆ ನಾನಾ ರಾಷ್ಟ್ರಗಳ ವಿದೇಶಿಗರೂ ಸಂಭ್ರಮಿಸುತ್ತಿದ್ದಾರೆ.
2005 ರಿಂದ ಈ ದಿನವನ್ನು ಆಚರಿಸಲಾಗುತ್ತದೆ ಆದರೂ, ಸೌದಿ ರಾಷ್ಟ್ರೀಯ ದಿನವನ್ನು ಕಳೆದ ಐದು ವರ್ಷಗಳಿಂದ ವರ್ಣರಂಜಿತ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತದೆ. ಸೌದಿ ಅರೇಬಿಯಾದ ವಿವಿಧ ನಗರಗಳಲ್ಲಿ ಈಗಾಗಲೇ ಏರ್ ಶೋ ಆರಂಭವಾಗಿದ್ದು, ಅಕ್ಟೋಬರ್ 2ರವರೆಗೆ ನಡೆಯಲಿದೆ. ಸೌದಿ ಅರೇಬಿಯಾದ ರಾಷ್ಟ್ರೀಯ ದಿನಾಚರಣೆ ಮತ್ತು ಬ್ರ್ಯಾಂಡಿಂಗ್‌ನ ಭಾಗವಾಗಿ, ವಿಶ್ವದ ವಿವಿಧ ಭಾಗಗಳಲ್ಲಿ ವಾಯುಪಡೆಯ ಪ್ರದರ್ಶನಗಳು ಪ್ರಗತಿಯಲ್ಲಿವೆ.
ಭಾರತೀಯರು ಸೇರಿದಂತೆ ಸ್ಥಳೀಯರು, ವಿದೇಶಿಗರು ರಾಷ್ಟ್ರೀಯ ದಿನಾಚರಣೆಯ ಸಂದೇಶದೊಂದಿಗೆ ಬ್ಯಾನರ್‌ಗಳನ್ನು ಹಾರಿಸಿ ತಮ್ಮ ವಾಹನಗಳನ್ನು ಅಲಂಕರಿಸುವ ಮೂಲಕ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಸೌದಿ ಅರೇಬಿಯಾ ತನ್ನ ಪರಂಪರೆಯನ್ನು ಹಿಡಿದಿಟ್ಟುಕೊಂಡು ಪ್ರತಿ ವರ್ಷ ರಾಷ್ಟ್ರೀಯ ದಿನ ಮತ್ತು ಸಂಸ್ಥಾಪಕರ ದಿನವನ್ನು ಆಚರಿಸುತ್ತದೆ. ಸೌದಿ ಅರೇಬಿಯಾದಲ್ಲಿನ ಅಭಿವೃದ್ಧಿಯಿಂದ ಹಿಡಿದು ದೇಶದ ನಾಯಕರಿಂದಾಗಿ ಮಕ್ಕಾ ಮದೀನಾ ಸಾಧಿಸಿದ ಬೆಳವಣಿಗೆಯನ್ನು ನೆನಪಿಸುವ ಮೂಲಕ ರಾಷ್ಟ್ರೀಯ ದಿನಾಚರಣೆಯನ್ನು ಆಚರಿಸಲಾಗುತ್ತದೆ.