ರಿಯಾದ್: ಹಜ್ ತಿಂಗಳು ಪ್ರವೇಶಿಸುತ್ತಿದ್ದಂತೆ, ಅಕ್ರಮ ಯಾತ್ರಾರ್ಥಿಗಳ ಪತ್ತೆಗಾಗಿ ಅಧಿಕಾರಿಗಳು ಮಕ್ಕಾದಲ್ಲಿ ಕಟ್ಟುನಿಟ್ಟಾಗಿ ಪರಿಶೀಲಿಸುತ್ತಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯವು ಈ ನಿಟ್ಟಿನಲ್ಲಿ ದೊಡ್ಡ ಪ್ರಮಾಣದ ಪ್ರಚಾರವನ್ನು ನಡೆಸಿದೆ.
ಉಮ್ರಾ ಯಾತ್ರಿಕರು ಜೂನ್ 6 ರೊಳಗೆ ದೇಶವನ್ನು ತೊರೆಯುವಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಮತ್ತು ಸಂದರ್ಶಕ ವೀಸಾದಲ್ಲಿರುವವರು ಮಕ್ಕಾಕ್ಕೆ ಪ್ರವೇಶಿಸಬಾರದು ಅಥವಾ ಮಕ್ಕಾದಲ್ಲಿ ತಂಗಬಾರದು. ದುಲ್ ಹಜ್ 15 ರವರೆಗೆ ಮಕ್ಕಾದಲ್ಲಿ ನಿರ್ಬಂಧಗಳನ್ನು ವಿಧಿಸಲಾಗಿದೆ.
ಪ್ರಸ್ತುತ, ಹಜ್ ಪರವಾನಿಗೆ ಹೊಂದಿರುವ ಯಾತ್ರಾರ್ಥಿಗಳು, ಮಕ್ಕಾದಲ್ಲಿ ಕೆಲಸ ಮಾಡಲು ಅನುಮತಿ ಹೊಂದಿರುವವರು ಮತ್ತು ಮಕ್ಕಾ ಇಕಾಮಾ ಹೊಂದಿರುವವರು ಮಾತ್ರ ಮಕ್ಕಾವನ್ನು ಪ್ರವೇಶಿಸಲು ಅನುಮತಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಅಧಿಕಾರಿಗಳು ನಡೆಸಿದ ವ್ಯಾಪಕ ತಪಾಸಣೆಯಲ್ಲಿ ಸಂದರ್ಶಕರ ವೀಸಾದಲ್ಲಿ ಮಕ್ಕಾಕ್ಕೆ ಬಂದು ಮಕ್ಕಾದಲ್ಲಿ ತಂಗಿದ್ದ ಅನೇಕರು ಸಿಕ್ಕಿಬಿದ್ದಿದ್ದಾರೆ ಎಂದು ಮಕ್ಕಾ ನಿವಾಸಿಗಳು ಹೇಳಿದ್ದಾರೆ.
ಹಿಂದಿನ ವರ್ಷಗಳಿಗಿಂತ ಭಿನ್ನವಾಗಿ, ಗಡಿ ಚೆಕ್ ಪೋಸ್ಟ್‌ಗಳು ಮತ್ತು ಮಕ್ಕಾಗೆ ಹೋಗುವ ವಿವಿಧ ರಸ್ತೆಗಳಲ್ಲಿ ಕಟ್ಟುನಿಟ್ಟಿನ ಪೊಲೀಸ್ ತಪಾಸಣೆಯನ್ನು ಏರ್ಪಡಿಸಲಾಗಿದೆ. ಇದರಿಂದಾಗಿ ವಿಸಿಟ್ ವೀಸಾದಲ್ಲಿ ಮಕ್ಕಾಕ್ಕೆ ಬಂದು ತಂಗಿರುವ ಮಲಯಾಳಿ ಕುಟುಂಬಗಳು ತೀವ್ರ ಆತಂಕಕ್ಕೆ ಒಳಗಾಗಿವೆ. ಕಟ್ಟುನಿಟ್ಟಿನ ತಪಾಸಣೆಯಿಂದಾಗಿ ಅಂತಹ ಕುಟುಂಬಗಳು ತಮ್ಮ ಕೊಠಡಿಗಳಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಹಠಾತ್ ಸೂಚನೆಗಳಿಂದಾಗಿ ಸಂದರ್ಶಕ ವೀಸಾದಲ್ಲಿರುವ ಕುಟುಂಬಗಳನ್ನು ತಕ್ಷಣವೇ ಮನೆಗೆ ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂಬ ಚಿಂತೆಯಲ್ಲಿದ್ದಾರೆ ಮಕ್ಕಾದಲ್ಲಿರುವ ಆನೇಕ ವಲಸಿಗರು.
ಈ ಹಿಂದೆ ವಿಸಿಟ್ ವೀಸಾದಲ್ಲಿ ಆಗಮಿಸುವವರು ಹಜ್ ಸೇವಾ ಕ್ಷೇತ್ರದಲ್ಲಿ ಸಕ್ರಿಯರಾಗುತ್ತಿದ್ದರು. ಈ ಬಾರಿಯೂ ಇಂತಹ ಹಲವು ಕುಟುಂಬಗಳು ಸೇವೆಗೆ ಮುಂದಾಗಿದ್ದು, ತಪಾಸಣೆ ಬಿಗಿಗೊಳಿಸಿರುವುದರಿಂದ ಅಂತಹವರು ಸೇವೆಗೆ ಸೇರದಂತೆ ಸ್ವಯಂ ಸೇವಾ ಸಂಸ್ಥೆಗಳು ಎಚ್ಚರಿಕೆ ನೀಡಿವೆ.
ಮಕ್ಕಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಧಿಕಾರಿಗಳು ‘ಅನಧಿಕೃತ ಹಜ್ ಸ್ವೀಕಾರಾರ್ಹವಲ್ಲ’ ಎಂಬ ಫಲಕಗಳನ್ನು ವ್ಯಾಪಕವಾಗಿ ಪ್ರದರ್ಶಿಸುತ್ತಿದ್ದಾರೆ. ಕಾನೂನು ಉಲ್ಲಂಘಿಸಿ ಸಿಕ್ಕಿಬಿದ್ದರೆ 10,000 ರಿಯಾಲ್ ದಂಡ ಮತ್ತು ಗಡಿಪಾರು.
ಹಜ್ ಸೇವೆಯಲ್ಲಿ ತೊಡಗಿರುವ ಸ್ವಯಂಸೇವಕರು ಸೇರಿದಂತೆ ಭಾರತೀಯ ವಲಸಿಗರು ಸೌದಿ ಅಧಿಕಾರಿಗಳ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕಾನ್ಸುಲ್ ಜನರಲ್ ಮುಹಮ್ಮದ್ ಶಾಹಿದ್ ಆಲಮ್ ಅವರು ನಿನ್ನೆ ಜಿದ್ದಾದಲ್ಲಿ ಭಾರತೀಯ ಕಾನ್ಸುಲೇಟ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಒತ್ತಿ ಹೇಳಿದರು.