janadhvani

Kannada Online News Paper

ಬಹು ನಿರೀಕ್ಷಿತ ಚುನಾವಣಾ ಬಾಂಡ್ ಮಾಹಿತಿಯನ್ನು ಪ್ರಕಟಿಸಿದ ಚುನಾವಣಾ ಆಯೋಗ

ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಬಳಸುವ ಚುನಾವಣಾ ಬಾಂಡ್‌ಗಳು ಅಸಾಂವಿಧಾನಿಕ ಎಂದು ಫೆಬ್ರುವರಿ 15ರಂದು ಘೋಷಿಸಿದ್ದ ಸುಪ್ರಿಂ ಕೋರ್ಟ್‌, ಇವುಗಳನ್ನು ರದ್ದುಪಡಿಸಿ ತೀರ್ಪು ನೀಡಿತ್ತು.

ನವದೆಹಲಿ: ಬಹು ನಿರೀಕ್ಷಿತ ಚುನಾವಣಾ ಬಾಂಡ್ ಮಾಹಿತಿಯನ್ನು ಸುಪ್ರೀಂ ಕೋರ್ಟ್ ನೀಡಿದ ಗಡುವಿಗಿಂತ ಒಂದು ದಿನ ಮೊದಲೇ ಚುನಾವಣಾ ಆಯೋಗ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡಿರುವ ಮಾಹಿತಿಯನ್ನು ಮಾರ್ಚ್ 15ರಂದು ಸಂಜೆ 5ಗಂಟೆಯೊಳಗೆ ತನ್ನ ವೆಬ್ ಸೈಟ್‌ನಲ್ಲಿ ಪ್ರಕಟಿಸುವಂತೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು. ಆದರೆ, ಆಯೋಗ ಮಾರ್ಚ್‌ 14ರಂದು ಸಂಜೆಯೇ ಪ್ರಕಟಿಸಿದೆ.

ಚುನಾವಣಾ ಬಾಂಡ್‌ಗಳನ್ನು ನಗದೀಕರಿಸಿಕೊಂಡಿರುವ ಪಕ್ಷಗಳಲ್ಲಿ ಬಿಜೆಪಿ, ಕಾಂಗ್ರೆಸ್‌, ಎಐಎಡಿಎಂಕೆ, ಬಿಆರ್‌ಎಸ್‌, ಶಿವಸೇನಾ, ಟಿಡಿಪಿ, ವೈಎಸ್‌ಆರ್‌ ಕಾಂಗ್ರೆಸ್‌, ಡಿಎಂಕೆ, ಜೆಡಿಎಸ್, ಎನ್‌ಸಿಪಿ, ತೃಣಮೂಲ ಕಾಂಗ್ರೆಸ್‌, ಜೆಡಿಯು, ಆರ್‌ಜೆಡಿ, ಎಎಪಿ ಮತ್ತು ಸಮಾಜವಾದಿ ಪಕ್ಷಗಳು ಸೇರಿವೆ.

ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಬಳಸುವ ಚುನಾವಣಾ ಬಾಂಡ್‌ಗಳು ಅಸಾಂವಿಧಾನಿಕ ಎಂದು ಫೆಬ್ರುವರಿ 15ರಂದು ಘೋಷಿಸಿದ್ದ ಸುಪ್ರಿಂ ಕೋರ್ಟ್‌, ಇವುಗಳನ್ನು ರದ್ದುಪಡಿಸಿ ತೀರ್ಪು ನೀಡಿತ್ತು. ಅಲ್ಲದೆ ದಾನಿಗಳು ಮತ್ತು ದೇಣಿಗೆ ಪಡೆದವರನ್ನು ಬಹಿರಂಗಪಡಿಸುವಂತೆ ನಿರ್ದೇಶಿಸಿತ್ತು.

ಚುನಾವಣಾ ಆಯೋಗದ ವೆಬ್ ಸೈಟ್‌ನಲ್ಲಿ ಬಾಂಡ್‌ಗಳ ಕುರಿತು ಎರಡು ಪಟ್ಟಿಗಳನ್ನು ಪ್ರಕಟಿಸಲಾಗಿದೆ. 337 ಪುಟಗಳ ಮೊದಲ ಪಟ್ಟಿಯಲ್ಲಿ ಬಾಂಡ್‌ಗಳ ಮುಖಬೆಲೆ ಮತ್ತು ದಿನಾಂಕಗಳೊಂದಿಗೆ ಅವುಗಳನ್ನು ಖರೀದಿಸಿದ ಕಂಪನಿಗಳನ್ನು ಒಳಗೊಂಡಿವೆ.

426 ಪುಟಗಳ ಎರಡನೇ ಪಟ್ಟಿಯಲ್ಲಿ ರಾಜಕೀಯ ಪಕ್ಷಗಳ ಹೆಸರು, ಬಾಂಡ್‌ಗಳ ಮುಖಬೆಲೆ ಮತ್ತು ಅವುಗಳನ್ನು ನಗದೀಕರಿಸಿದ ದಿನಾಂಕಗಳು ಒಳಗೊಂಡಿವೆ. ಬಾಂಡ್‌ಗಳ ಸೀರಿಯಲ್ ನಂಬರ್ ವೆಬ್‌ಸೈಟ್‌ನಲ್ಲಿ ಒದಗಿಸಲಾಗಿಲ್ಲ. ಹಾಗಾಗಿ, ಎರಡು ಪಟ್ಟಿಗಳನ್ನು ಪರಸ್ಪರ ಸಂಬಂಧಿಸಲು ಮತ್ತು ಯಾವ ಕಂಪನಿ, ಯಾವ ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡಿದೆ ಎಂದು ತಿಳಿದುಕೊಳ್ಳಲು ಸಾಧ್ಯವಿಲ್ಲ.

ಚುನಾವಣಾ ಬಾಂಡ್‌ಗಳ ಅಂಕಿಅಂಶಗಳ ವಿವರ ನೋಡಲು ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ

ಇಲ್ಲಿ ಕ್ಲಿಕ್ ಮಾಡಿ

ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ ಪ್ರಮುಖ 10 ಕಂಪನಿಗಳು :

1.ಫ್ಯೂಚರ್ ಗೇಮಿಂಗ್ ಅಂಡ್ ಹೋಟೆಲ್ ಸರ್ವಿಸಸ್ ಲಿಮಿಟೆಡ್:
ಸ್ಯಾಂಟಿಯಾಗೊ ಮಾರ್ಟಿನ್ ಒಡೆತನದ ಲಾಟರಿ ಕಂಪನಿಯಾಗಿರುವ ಇದು, ಬರೋಬ್ಬರಿ 1,368 ಕೋಟಿ ರೂಪಾಯಿಯ ಬಾಂಡ್‌ಗಳನ್ನು ಖರೀದಿಸಿದೆ. ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕಂಪನಿ ಮತ್ತು ಅದರ ಸ್ಥಾಪಕ ಮಾರ್ಟಿನ್ ಈ ಹಿಂದೆ ಇಡಿ ವಿಚಾರಣೆಗೆ ಒಳಗಾಗಿದ್ದರು ಮತ್ತು ಸಿಬಿಐಯ ದೋಷಾರೋಪ ಪಟ್ಟಿಯಲ್ಲಿ ಕಂಪನಿ ಮತ್ತು ಮಾಲೀಕ ಮಾರ್ಟಿನ್ ಹೆಸರಿದೆ.

ಕಳೆದ ವರ್ಷ ಇಡಿ 450 ಕೋಟಿ ರೂಪಾಯಿ ಮೌಲ್ಯದ ಕಂಪನಿಯ ಆಸ್ತಿಯನ್ನು ವಶಪಡಿಸಿಕೊಂಡಿತ್ತು. ಕಳೆದ ವಾರವಷ್ಟೇ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಮಾರ್ಟಿನ್ ಅವರ ಅಳಿಯನ ಮನೆಯಲ್ಲಿ ಇಡಿ ಶೋಧ ನಡೆಸಿತ್ತು.

ಕೊಯಂಬತ್ತೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಈ ಕಂಪನಿ, ಸಿಕ್ಕಿಂ ಮತ್ತು ನಾಗಾಲ್ಯಾಂಡ್‌ನಲ್ಲಿ ಪೇಪರ್ ಲಾಟರಿಯ ಏಕೈಕ ವಿತರಕ ಸಂಸ್ಥೆಯಾಗಿದೆ. ಇದರ ಬಾಂಡ್‌ಗಳನ್ನು ಫ್ಯೂಚರ್ ಗೇಮಿಂಗ್ ಅಂಡ್ ಹೋಟೆಲ್ ಸರ್ವಿಸ್ ಪಿಆರ್, ಫ್ಯೂಚರ್ ಗೇಮಿಂಗ್ ಅಂಡ್‌ ಹೋಟೆಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್, ಫ್ಯೂಚರ್ ಗೇಮಿಂಗ್ ಅಂಡ್‌ ಹೋಟೆಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಎಂದು ಚು. ಆಯೋಗದ ಡೇಟಾದಲ್ಲಿ ಪಟ್ಟಿ ಮಾಡಲಾಗಿದೆ.

2. ಮೇಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ :
ಈ ಕಂಪನಿಯು 966 ಕೋಟಿ ರೂ.ಮೌಲ್ಯದ ಬಾಂಡ್ ಖರೀದಿಸಿದೆ. ಪಿಪಿ ರೆಡ್ಡಿ ಎಂಬವರ ಒಡೆತನದ ಕಂಪನಿ ಇದಾಗಿದ್ದು, ಈ ಪಿಪಿ ರೆಡ್ಡಿ ತೆಲಂಗಾಣದ ಮಾಜಿ ಸಿಎಂ ಕೆಸಿಅರ್ ಅವರಿಗೆ ಆಪ್ತ ಎನ್ನಲಾಗಿದೆ. ತೆಲಂಗಾಣಲ್ಲಿ ಬಿಆರ್ ಎಸ್ ಸರ್ಕಾರದ ಅವಧಿಯಲ್ಲಿ 1.47 ಲಕ್ಷ ಕೋಟಿ ಮೊತ್ತದ ಕಾಳೇಶ್ವರಂ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಮಾಡಿದ್ದು ಇದೇ ಮೇಘಾ ಇಂಜಿನಿಯರಿಂಗ್ ಕಂಪನಿ ಎನ್ನುವುದು ಇಲ್ಲಿ ಗಮನಾರ್ಹ.

3.ಕ್ವಿಕ್ ಸಪ್ಲೈ ಚೈನ್ ಪ್ರೈ.ಲಿಮಿಟೆಡ್:
ಈ ಕಂಪನಿ 410 ಕೋಟಿ ರೂ ದೇಣಿಗೆಯನ್ನು ರಾಜಕೀಯ ಪಕ್ಷಗಳಿಗೆ ನೀಡಿದೆ‌. ಈ ಕಂಪನಿಯ ನಿರ್ದೇಶಕರಲ್ಲಿ ಒಬ್ಬರು ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್‌ನ ನಿರ್ದೇಶಕರೂ ಹೌದು. ಕೆಲ ವರದಿಗಳ ಪ್ರಕಾರ, ರಿಲಯನ್ಸ್ ಕಂಪನಿ ಕ್ವಿಕ್ ಸಪ್ಲೈ ಹೆಸರಿನಲ್ಲಿ ದೇಣಿಗೆ ನೀಡಿದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಖಚಿತ ಮಾಹಿತಿಯಿಲ್ಲ.

4. ವೇದಾಂತ ಲಿಮಿಟೆಡ್:
ರೂ. 399 ಕೋಟಿ ಮೌಲ್ಯದ ಚುನಾವಣಾ ಬಾಂಡ್ ಖರೀದಿಸಿರುವ ಈ ಕಂಪನಿ ವಿರುದ್ದ ಸಾಲದ ಆರೋಪ ಮತ್ತು ಪರಿಸರ ನಿಯಮಗಳನ್ನು ಉಲ್ಲಂಘಿಸಿದ ಆರೋಪಗಳಿವೆ. ಗಣಿಗಾರಿಕೆ ದೈತ್ಯ ವೇದಾಂತ ಲಿಮಿಟೆಡ್ ಉದ್ಯಮಿ ಅನಿಲ್ ಅಗರ್ವಾಲ್ ಸ್ಥಾಪಿಸಿದ ಕಂಪನಿಯಾಗಿದೆ. ಮುಂಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ.

5. ಹಲ್ದಿಯಾ ಎನರ್ಜಿ ಲಿಮಿಟೆಡ್ :
ಈ ಕಂಪನಿ ರೂ. 375 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ. 1994 ರಲ್ಲಿ ಸ್ಥಾಪಿಯವಾದ ಈ ಕಂಪನಿ ಆರ್‌ಪಿ-ಸಂಜೀವ್ ಗೋಯೆಂಕಾ ಗ್ರೂಪ್‌ನ ಭಾಗವಾದ ಸಿಇಎಸ್‌ಸಿ ಲಿಮಿಟೆಡ್‌ನ ಒಡೆತನದಲ್ಲಿದೆ. ಇದು ಕೋಲ್ಕತ್ತಾ ನಗರ ಮತ್ತು ಅದರ ಉಪನಗರಗಳ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಪಶ್ಚಿಮ ಬಂಗಾಳದ ಹಲ್ದಿಯಾದಲ್ಲಿ ಉಷ್ಣ ವಿದ್ಯುತ್ ಸ್ಥಾವರವನ್ನು ನಿರ್ವಹಿಸುತ್ತದೆ.

6. ಎಸ್ಸೆಲ್ ಮೈನಿಂಗ್ ಅಂಡ್ ಇಂಡಸ್ಟ್ರೀಸ್ ಲಿಮಿಟೆಡ್:
ಈ ಕಂಪನಿ 224.5 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ. ಆದಿತ್ಯ ಬಿರ್ಲಾ ಗ್ರೂಪ್‌ನ ಭಾಗವಾಗಿರುವ ಈ ಕಂಪನಿ ದೇಶದ ಅತಿದೊಡ್ಡ ಕಬ್ಬಿಣದ ಅದಿರು ಗಣಿಗಾರಿಕೆ ಕಂಪನಿಗಳಲ್ಲಿ ಒಂದಾಗಿದೆ ಮತ್ತು ನೋಬೆಲ್ ಫೆರೋ ಮಿಶ್ರಲೋಹಗಳ ಉತ್ಪಾದಕರಲ್ಲಿ ಒಂದಾಗಿದೆ.

2022 ರಲ್ಲಿ, ಕಂಪನಿಯು ಸಾಂಚಿಯಿಂದ ಸುಮಾರು 200 ಕಿಮೀ ದೂರದಲ್ಲಿರುವ ಬಕ್ಸ್ವಾಹಾ ಅರಣ್ಯದಲ್ಲಿ ತನ್ನ ಗಣಿಗಾರಿಕೆ ಯೋಜನೆಯನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಿದಾಗ ಹಿಂಸಾಚಾರದ ಬೆದರಿಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ಮಧ್ಯಪ್ರದೇಶ ಸರ್ಕಾರಕ್ಕೆ ಪತ್ರ ಬರೆದಿತ್ತು. 2014 ರಲ್ಲಿ, ಒಡಿಶಾದಲ್ಲಿ ಗಣಿಗಾರಿಕೆ ನಿಯಮ ಉಲ್ಲಂಘನೆಯ ಆರೋಪದ ತನಿಖೆಗೆ ನಿಯೋಜಿಸಲಾದ ತಜ್ಞರ ಸಮಿತಿಯು, ಎಸ್ಸೆಲ್ ಮೈನಿಂಗ್ ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆಯನ್ನು ನಡೆಸಿದೆ ಎಂದು ಹೇಳಿತ್ತು.

7. ವೆಸ್ಟರ್ನ್ ಯುಪಿ ಪವರ್ ಟ್ರಾನ್ಸ್‌ಮಿಷನ್ ಕಂಪನಿ ಲಿಮಿಟೆಡ್:
ಈ ಕಂಪನಿ ಮೇಲೆ ಮೇಘಾ ಗ್ರೂಪ್ ಷೇರುದಾರರ ನಿಯಂತ್ರಣ ಇದೆ. ಇದು ರೂ 220 ಕೋಟಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದೆ. ಮೇಘಾ ಇಂಜಿನಿಯರಿಂಗ್ ಮತ್ತು ಇದು ಜಂಟಿಯಾಗಿ 1,186 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ.

8. ಕೆವೆಂಟರ್ ಫುಡ್‌ಪಾರ್ಕ್ ಇನ್ಫ್ರಾ ಲಿಮಿಟೆಡ್:
ಇದು 2019 ರಿಂದ 195 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ. ಕೋಲ್ಕತ್ತಾ ಮೂಲದ ಈ ಕಂಪನಿ ಆಹಾರ ಸಂಸ್ಕರಣೆ ಮತ್ತು ಕೃಷಿ ಉತ್ಪನ್ನಗಳ ರಫ್ತು ವ್ಯವಹಾರ ನಡೆಸುತ್ತಿದೆ.

9.ಎಂಕೆಜಿ ಎಂಟರ್‌ಪ್ರೈಸಸ್ ಲಿಮಿಟೆಡ್:
ಕೋಲ್ಕತ್ತಾದಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಈ ಕಂಪನಿ ಉಕ್ಕಿನ ವ್ಯವಹಾರ ನಡೆಸುತ್ತದೆ. ಇದು 180 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಖರೀಸಿದೆ. ಇದರ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಮಹೇಂದ್ರ ಕುಮಾರ್ ಜಲನ್ ಕೆಲವು ಕೆವೆಂಟರ್ ಕಂಪನಿಗಳ ನಿರ್ದೇಶಕರೂ ಆಗಿದ್ದಾರೆ. ಕೆವೆಂಟರ್ ಫುಡ್‌ಪಾರ್ಕ್ ಇನ್ಫ್ರಾ ಲಿಮಿಟೆಡ್ ಜೊತೆ ಇದು ಉತ್ತಮ ಸಂಬಂಧ ಹೊಂದಿದೆ.

10. ಮದನ್‌ಲಾಲ್ ಲಿಮಿಟೆಡ್:
ಈ ಕಂಪನಿ 185.5 ಕೋಟಿ ರೂ.ಗಳ ಬಾಂಡ್‌ಗಳನ್ನು ಖರೀದಿಸಿದೆ. ಕಂಪನಿಯು ಎಂಕೆಜೆ ಗ್ರೂಪ್ ಮತ್ತು ಕೆವೆಂಟರ್ ಗ್ರೂಪ್ ಕಂಪನಿಗಳ ಭಾಗವಾಗಿದೆ. ಈ ಕಂಪನಿಯು ಸೆಕ್ಯುರಿಟೀಸ್ ಮತ್ತು ರಿಯಲ್ ಎಸ್ಟೇಟ್ ವಲಯದ ಖರೀದಿ ಮತ್ತು ಮಾರಾಟದಲ್ಲಿ ತೊಡಗಿಸಿಕೊಂಡಿದೆ.

ಸುಪ್ರೀಂ ಆದೇಶದಲ್ಲಿ ಮಾರ್ಪಾಡು ಕೋರಿ ಚು.ಆಯೋಗ ಅರ್ಜಿ:

ಚುನಾವಣಾ ಬಾಂಡ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 11ರಂದು ನೀಡಿರುವ ಆದೇಶದಲ್ಲಿ ಮಾರ್ಪಾಡು ಕೋರಿ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಈ ಅರ್ಜಿಯ ವಿಚಾರಣೆ ಇಂದು (ಮಾರ್ಚ್ 15, ಶುಕ್ರವಾರ) ನಡೆಯಲಿದೆ.

ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗದೆ. ಈ ದಾಖಲೆಗಳ ಪ್ರತಿಗಳನ್ನು ತಾನು ಕಾದಿಟ್ಟುಕೊಂಡಿಲ್ಲ. ಹೀಗಾಗಿ, ಪ್ರಕರಣದ ಕುರಿತ ದಾಖಲೆಗಳನ್ನು ತನಗೆ ಮರಳಿಸಿದರೆ ಕೋರ್ಟ್ ನಿರ್ದೇಶನ ಪಾಲನೆ ಮಾಡಲು ಸಾಧ್ಯವಾಗಲಿದೆ ಎಂದು ಚುನಾವಣಾ ಆಯೋಗ ಕೋರಿದೆ.

error: Content is protected !! Not allowed copy content from janadhvani.com