janadhvani

Kannada Online News Paper

ಬ್ಯಾರಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹ- ಸಿಎಂ, ಡಿಸಿಎಂ ಹಾಗೂ ಸಭಾಪತಿಗಳಿಗೆ ಮನವಿ ಸಲ್ಲಿಕೆ

ಬೆಂಗಳೂರು: ಕರ್ನಾಟಕ ರಾಜ್ಯಾದ್ಯಂತ ಅನಾದಿ ಕಾಲದಿಂದ ಮೂಲ ನಿವಾಸಿಗಳಾಗಿ ವಾಸಿಸುತ್ತಿರುವ, ದ್ರಾವಿಡ ತಮಿಳು ಮೂಲ ಆಧಾರಿತ ಪ್ರಸ್ತುತ ಕರಾವಳಿ ಜಿಲ್ಲೆಯಾದ್ಯಂತ ಅಗಾಧವಾಗಿ ವಾಸಿಸುತ್ತಿರುವ ಸುಮಾರು ಇಪ್ಪತ್ತೈದು ಲಕ್ಷಕ್ಕೂ ಮಿಕ್ಕಿ ಜನ ಸಂಖ್ಯೆಯನ್ನು ಹೊಂದಿರುವ ಬ್ಯಾರಿ ಜನಾಂಗದ ಶ್ರೆಯೋಬಿವೃದ್ದಿಗೆ ಕರ್ನಾಟಕ ರಾಜ್ಯ ಬ್ಯಾರಿ ಆಭಿವೃದ್ದಿ ನಿಗಮ ಸ್ಥಾಪಿಸಬೇಕೆಂದು ಒತ್ತಾಯಿಸಿ ಇಂದು ಪ್ರಮುಖ ಸಂಸ್ಥೆ ಮತ್ತು ಪ್ರಮುಖ ವ್ಯಕ್ತಿಗಳ ನಿಯೋಗವು ಮಾನ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯರವರನ್ನು ಭೇಟಿ ಮಾಡಿ ಪ್ರಸ್ತಾವಿತ ಮನವಿಯನ್ನು ಸಲ್ಲಿಸಲಾಯಿತು.

ಹಾಲಿ ಬ್ಯಾರಿ ಜನಾಂಗವನ್ನು ರಾಜ್ಯಾದ್ಯಂತ 95 ಲಕ್ಷ ಧಾರ್ಮಿಕ ಅಲ್ಪ ಸಂಖ್ಯಾತ ನೆಲೆಯಲ್ಲಿ ಪರಿಗಣಿಸಲ್ಪಡುತ್ತಿದ್ದು, ಬ್ಯಾರಿ ಭಾಷಾ ಅಲ್ಪ ಸಂಖ್ಯಾತ ಜನಾಂಗವು ಇತರ ಸಮುದಾಯಕ್ಕಿಂತ ಭಿನ್ನವಾಗಿ ಗುರುತಿಸಿಕೊಂಡಿದೆ. ಬ್ಯಾರಿ ವ್ಯವಹಾರಿತ ಈ ಜನಾಂಗವು ವ್ಯವಹಾರ ಸಂಬಂಧಿತ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಗುರುತಿಸಿ ಕೊಂಡಿದ್ದು, ಬ್ಯಾರಿ ಆಡು ಭಾಷೆಯನ್ನು ಒಳಗೊಂಡಿದೆ. ದ್ರಾವಿಡ ಮೂಲ ಭಾಷೆಯಾದ ತಮಿಳು ಪದಗಳನ್ನು ಹೋಲುವ ಅಗಾಧ ಜಾನಪದಗಳನ್ನು ತನ್ನ ದೈನಂದಿನ ಚಟುವಟಿಕೆಯಲ್ಲಿ ಬಳಕೆ ಮಾಡುತ್ತಿದ್ದು, ಶೈಕ್ಷಣಿಕ, ಸಾಮುದಾಯಿಕ ಮತ್ತು ರಾಜಕೀಯವಾಗಿ ಅಗಾಧ ಕೊಡುಗೆ ನೀಡಿದೆ. ಹಾಗಿದ್ದೂ ಬ್ಯಾರಿ ಜನಾಂಗದಲ್ಲಿ ಅಗಾಧ ಪ್ರಮಾಣದಲ್ಲಿ ಹಿಂದುಳಿಯುವಿಕೆ ಗುರುತಿಸಿಕೊಂಡಿದ್ದು, ಸರಕಾರದ ನೇರ ಸವಲತ್ತು ಅಗತ್ಯವಿದ್ದು, ಈ ನಿಟ್ಟಿನಲ್ಲಿ ಅಭಿವೃದ್ದಿ ನಿಗಮ ಸ್ಥಾಪನೆ ಅಗತ್ಯವಾಗಿರುತ್ತದೆ.

ರಾಜ್ಯದಲ್ಲಿ ಇತರ ಭಾಷಾ ಅಲ್ಪ ಸಂಖ್ಯಾತ, ವೃತ್ತಿ ಅಲ್ಪ ಸಂಖ್ಯಾತ ಜನರ ಅಭಿವೃದ್ಧಿಗೆ ಸರಕಾರ ವಿಶೇಷ ಕೊಡುಗೆ ನೀಡಿ, ನಿಗಮ ಸ್ಥಾಪಿಸಿದಂತೆ ರಾಜ್ಯದ 25 ಲಕ್ಷ ಬ್ಯಾರಿ ಜನಾಂಗದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ದಿ ಉದ್ದೇಶಿತ, ವಾರ್ಷಿಕ ರೂಪಾಯಿ 200 ಕೋಟಿ ನಿಧಿ ಮೀಸಲು ಯೋಜನೆಯ, ಕರ್ನಾಟಕ ರಾಜ್ಯ ಬ್ಯಾರಿ ಅಭಿವೃದ್ದಿ ನಿಗಮ ಸ್ಥಾಪನೆಗೆ ಸರಕಾರವನ್ನು ಆಗ್ರಹಿಸಲಾಗಿದೆ. ದಿನಾಂಕ 14-02-2024ರ ಬುಧವಾರದಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಹಾಗೂ ವಿಧಾನ ಸಭಾಧ್ಯಕ್ಷರಾದ ಯು.ಟಿ.ಖಾದರ್ ರವರನ್ನು ಬೇಟಿ ಮಾಡಿ ಮನವಿ ಸಲ್ಲಿಸಲಾಯಿತು.

ಡಾ॥ ಯು.ಟಿ ಇಫ್ತಿಕಾರ್ ಅಲಿ ಮುಂದಾಳತ್ವದಲ್ಲಿ, ಅಬ್ದುಲ್ ಅಝೀಝ್ ಬೈಕಂಪಾಡಿ ರವರ ನೇತ್ರತ್ವದ ಈ ನಿಯೋಗದಲ್ಲಿ ಅಬ್ದುಲ್ ಜಲೀಲ್ (ಅದ್ದು) ಕೃಷ್ಣಾಪುರ, ಮಹಮ್ಮದ್ ಶಾಕಿರ್ ಹಾಜಿ, ಮೊಹಮ್ಮದ್ ಹನೀಫ್ ಯು, ಬಾವಾ ಪದರಂಗಿ, ಮೊಹಮ್ಮದ್ ಅಶ್ರಫ್ ಬದ್ರಿಯಾ, ಇ.ಕೆ.ಹುಸೈನ್, ಮೊಹಮ್ಮದ್ ಸಾಲಿಹ್ ಬಜ್ಪೆ, ಹಮೀದ್ ಕಿನ್ಯ, ಅಬ್ದುಲ್ ಲತೀಫ್ ಬ್ಲೂ ಸ್ಟಾರ್, ಅಬ್ದುಲ್ ಖಾದರ್ ಇಡ್ಮಾ ಮುಂತಾದವರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com