ದೇಶದೆಲ್ಲೆಡೆ ಇಂದು 75ನೇ ವರ್ಷದ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. ಭಾರತವು ವಿಶ್ವದಲ್ಲೇ ಅತಿದೊಡ್ಡ ಲಿಖಿತ ಸಂವಿಧಾನವನ್ನು ಹೊಂದಿದ್ದು, ಪ್ರಜೆಗಳಿಂದಲೇ, ಪ್ರಜೆಗಳಿಗಾಗಿಯೇ ಪ್ರಜೆಗಳಿಗೊಸ್ಕರವೇ ನಡೆಸುವ ಆಡಳಿತವೇ ಪ್ರಜಾಪ್ರಭುತ್ವವಾಗಿದೆ.
ಪ್ರಜೆಗಳನ್ನು ಪ್ರಭುಗಳೆಂದೇ ಭಾವಿಸುವ ದೇಶವು ಭಾರತವಾಗಿದೆ. 1947 ರಲ್ಲಿ ಸ್ವಾತಂತ್ರ್ಯ ಸಿಕ್ಕಿದರೂ ಕೂಡ ನಮ್ಮ ದೇಶವು ಸಂವಿಧಾನವನ್ನು ಹೊಂದಿರಲಿಲ್ಲ. 26 ಜನವರಿ 1950 ರಂದು ಸಂವಿಧಾನವನ್ನು ಸ್ಥಾಪನೆ ಮಾಡಿದ ದಿನವಾಗಿದ್ದು, ಇದರ ಗೌರವಾರ್ಥವಾಗಿ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.
ಗಣರಾಜ್ಯೋತ್ಸವ ದಿನದ ಇತಿಹಾಸ
1950ರ ಜನವರಿ 26ರಂದು ಸಂವಿಧಾನವನ್ನು ಅಂಗೀಕರಿಸುವ ಮೂಲಕ ಗಣರಾಜ್ಯ ಎಂದು ಘೋಷಿಸಲ್ಪಟ್ಟ ದಿನವಾಗಿದೆ. ದೇಶದ ಮೊದಲ ಸಂವಿಧಾನ ಸಭೆ 1946ರ ಡಿಸೆಂಬರ್ 9ರಂದು ತನ್ನ ಮೊದಲ ಅಧಿವೇಶನ ನಡೆಸಿತ್ತು. ಕೊನೆಯ ಅಧಿವೇಶನ 1949ರ ನವೆಂಬರ್ 26ರಂದು ನಡೆದಿತ್ತು. ಡಾ.ಬಿ.ಆರ್. ಅಂಬೇಡ್ಕರ್ ನೇತೃತ್ವದ ಸಂವಿಧಾನ ರಚನಾ ಸಮಿತಿ ರಚಿಸಿದ ಸಂವಿಧಾನವನ್ನು ಒಂದು ವರ್ಷದ ಬಳಿಕ ಅಂಗೀಕರಿಸಲಾಯಿತು. ಹೀಗಾಗಿ 26 ಜನವರಿ 1950 ರಂದು ಸಂವಿಧಾನ ಜಾರಿಗೆ ಬಂದಿತು. ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಭಾರತದ ಬಾವುಟವನ್ನು ಹಾರಿಸಿ ಸಂವಿಧಾನ ಜಾರಿಗೆ ಬಂದ ದಿನವನ್ನು ಘೋಷಿಸಿದ್ದರು.
ಗಣರಾಜ್ಯೋತ್ಸವ ದಿನದ ಆಚರಣೆ
ರಾಜಪ್ರಭುತ್ವವು ಅಂತ್ಯವಾಗಿ ಭಾರತದಲ್ಲಿ ಸಂವಿಧಾನವನ್ನು ಸ್ಥಾಪಿಸಿದ ದಿನವಾಗಿದ್ದು, ಪ್ರತಿ ವರ್ಷವು ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಗುತ್ತದೆ. ದೇಶದಲ್ಲಿ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನದಂದು, ಅಧ್ಯಕ್ಷರು ರಾಷ್ಟ್ರಧ್ವಜವನ್ನು ಹಾರಿಸುತ್ತಾರೆ ಮತ್ತು ನಂತರ ಅದ್ಭುತವಾದ ಮಿಲಿಟರಿ ಮತ್ತು ಸಾಂಸ್ಕೃತಿಕ ವೈಭವವನ್ನು ಪ್ರದರ್ಶಿಸಲಾಗುತ್ತದೆ. ಹಾಗೆಯೇ ಭಾರತದ ರಾಷ್ಟ್ರಪತಿಗಳು ದೇಶದ ಅರ್ಹ ನಾಗರಿಕರಿಗೆ ಪದ್ಮ ಪ್ರಶಸ್ತಿಗಳನ್ನು ವಿತರಿಸುತ್ತಾರೆ ಮತ್ತು ವೀರ ಸೈನಿಕರಿಗೆ ಪರಮವೀರ ಚಕ್ರ, ಅಶೋಕ ಚಕ್ರ ಮತ್ತು ವೀರ ಚಕ್ರವನ್ನು ನೀಡಲಾಗುತ್ತದೆ.
ನವದೆಹಲಿಯ ರಾಜ್‌ಪಥ್‌ನಲ್ಲಿ ಭಾರತದ ರಾಷ್ಟ್ರೀಯ ಸೇನೆಯನ್ನು ಒಳಗೊಂಡ ಪರೇಡ್, ರಾಜ್ಯಗಳ ಸಂಸ್ಕೃತಿಯನ್ನು ಬಿಂಬಿಸುವ ಟ್ಯಾಬ್ಲೋಗಳು ಈ ಮೆರವಣಿಗೆಯಲ್ಲಿ ಕಣ್ಮನ ಸೆಳೆಯುತ್ತವೆ. ಈ ದಿನ ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಹುತಾತ್ಮರಿಗೆ ಗೌರವ ನೀಡಲಾಗುತ್ತದೆ. ದೇಶದಾದಂತ್ಯ ಶಾಲೆ ಕಾಲೇಜು ಮತ್ತು ಸರ್ಕಾರಿ ಕಚೇರಿಗಳು ಸೇರಿದಂತೆ ಎಲ್ಲಾ ಕಡೆ ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಗುತ್ತದೆ.