ಮಂಗಳೂರು: ‘ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ದುರ್ಬಳಕೆ ಸಾಧ್ಯತೆ ಕುರಿತ ಸಂಶಯ ಹೋಗಲಾಡಿಸಲು ಕೇಂದ್ರ ಚುನಾವಣಾ ಆಯೋಗವೇ ಇವಿಎಂ ಹ್ಯಾಕಥಾನ್ ಆಯೋಜಿಸಬೇಕು’ ಎಂದು ಶಾಸಕ ಯು.ಟಿ. ಖಾದರ್ ಆಗ್ರಹಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚುನಾವಣೆಗಳಲ್ಲಿ ಇವಿಎಂ ದುರ್ಬಳಕೆ ಮಾಡಲಾಗುತ್ತಿದೆ ಎಂಬ ಸಂಶಯ ಹಲವು ಸಮಯದಿಂದ ಇದೆ. ಈ ಬಾರಿಯ ಚುನಾವಣೆಯ ಫಲಿತಾಂಶವೂ ಕೆಲವು ಕಡೆಗಳಲ್ಲಿ ಅಂತಹ ಅನುಮಾನಕ್ಕೆ ಎಡೆಮಾಡಿದೆ. ಇವಿಎಂ ದುರ್ಬಳಕೆ ಸಂಪೂರ್ಣವಾಗಿ ಅಸಾಧ್ಯ ಎಂಬುದನ್ನು ನಿರೂಪಿಸಲು ಚುನಾವಣಾ ಆಯೋಗವೇ ಹ್ಯಾಕಥಾನ್ ನಡೆಸಬೇಕು’ ಎಂದು ಒತ್ತಾಯಿಸಿದರು.
ಮತಯಂತ್ರ ದುರ್ಬಳಕೆ ಮೂಲಕ ಬಿಜೆಪಿ ತನಗೆ ಪೂರಕವಾದ ಫಲಿತಾಂಶ ಪಡೆದಿರುವ ಅನುಮಾನ ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ ಇದೆ. ಈ ಕುರಿತು ತಕರಾರು ಅರ್ಜಿ ಸಲ್ಲಿಸಲು ಅವರು ಸಿದ್ಧತೆ ನಡೆಸಿದ್ದಾರೆ. ಕಾನೂನು ತಜ್ಞರು ಮತ್ತು ತಾಂತ್ರಿಕ ಪರಿಣಿತರ ನೆರವು ಪಡೆದು ಶೀಘ್ರದಲ್ಲೇ ಚುನಾವಣಾ ಆಯೋಗ ಹಾಗೂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದಾರೆ ಎಂದರು.
ಹೈಕಮಾಂಡ್ ನಿರ್ಧರಿಸಲಿದೆ: ಸಚಿವ ಸಂಪುಟದಲ್ಲಿ ಸ್ಥಾನ ದೊರೆಯುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಮ್ಮಿಶ್ರ ಸರ್ಕಾರದ ಸಂಪುಟದಲ್ಲಿ ನಮ್ಮ ಪಕ್ಷಕ್ಕೆ ದೊರೆತಿರುವ ಸ್ಥಾನಗಳನ್ನು ತುಂಬುವ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ. ಪಕ್ಷದ ವರಿಷ್ಠರು ಕೈಗೊಳ್ಳುವ ತೀರ್ಮಾನಕ್ಕೆ ನಾನು ಬದ್ಧ’ ಎಂದರು.
Evm doori prayojanavilla no body Hindus votes for congress in south canara and udupi