ಮಂಗಳೂರು: ಅನಿವಾಸಿ ಕನ್ನಡಿಗರ ಬಹು ನಿರೀಕ್ಷಿತ ಬೇಡಿಕೆಯೊಂದು ಈಡೇರುತ್ತಿದೆ. ಮಂಗಳೂರು ಮತ್ತು ಸೌದಿ ಅರೇಬಿಯಾದ ಜಿದ್ದಾ ನಡುವೆ ನೇರ ವಿಮಾನಯಾನವು ಆರಂಭಗೊಳ್ಳಲಿದೆ.
ಮುಂದಿನ ಏಪ್ರಿಲ್ ತಿಂಗಳ 3 ರಿಂದ ವಿಮಾನ ಸೇವೆಯ ಆರಂಭಗೊಳ್ಳುವುದಾಗಿ ಏರ್ ಇಂಡಿಯಾ ಎಕ್ಸ್ಪ್ರೆಸ್ ವೆಬ್ಸೈಟ್ ಮೂಲಕ ತಿಳಿದು ಬಂದಿದೆ. ಏರ್ ಇಂಡಿಯಾ ಎಕ್ಸ್ಪ್ರೆಸ್ನ ವೆಬ್ಸೈಟ್ನಲ್ಲಿ ಜಿದ್ದಾ ಮತ್ತು ಮಂಗಳೂರು ನಡುವಿನ ಬುಕಿಂಗ್ ಆರಂಭಗೊಂಡಿದ್ದು,ಏಪ್ರಿಲ್ ತಿಂಗಳಿನಿಂದ ಪ್ರತಿ ಬುಧವಾರ ಜಿದ್ದಾದಿಂದಲೂ, ಅದೇ ದಿನ ಮಂಗಳೂರಿನಿಂದಲೂ ವಿಮಾನ ಲಭ್ಯವಿದೆ.
ಮಂಗಳೂರಿನಿಂದ ಮಧ್ಯಾಹ್ನ 2-50 ಕ್ಕೆ ಹೊರಟು ಸೌದಿ ಸಮಯ ಸಾಯಂಕಾಲ 6-25 ಕ್ಕೆ ಜಿದ್ದಾ ತಲುಪಲಿದೆ. ಜಿದ್ದಾದಿಂದ ರಾತ್ರಿ 7-25 ಕ್ಕೆ ಹೊರಟು ಮುಂಜಾನೆ 3.40 ಕ್ಕೆ ಮಂಗಳೂರು ತಲುಪಲಿದೆ.
ಉಮ್ರಾ ಹಾಗೂ ಇತರ ಯಾತ್ರಿಕರ ಅನುಕೂಲಕ್ಕಾಗಿ ಮಂಗಳೂರಿನಿಂದ ಜಿದ್ದಾ ಅಥವಾ ಮದೀನಾಕ್ಕೆ ನೇರ ವಿಮಾನ ಯಾನದ ವ್ಯವಸ್ಥೆ ಕಲ್ಪಿಸುವಂತೆ ಹಜ್ ಮತ್ತು ಉಮ್ರಾ ಟೂರ್ ಏಜೆನ್ಸಿಗಳು ಸೇರಿದಂತೆ ವಲಸಿಗ ಕನ್ನಡಿಗರು ಹಾಗೂ ನೆರೆರಾಜ್ಯ ಕೇರಳದ ಕಾಸರಗೋಡು ಜಿಲ್ಲೆಯ ಪ್ರಯಾಣಿಕರ ಬೇಡಿಕೆಯಾಗಿತ್ತು.
ಕಳೆದ ವರ್ಷ ಮಾರ್ಚ್ನಲ್ಲಿ ಮಂಗಳೂರು-ಜಿದ್ದಾ ಮಧ್ಯೆ ನೇರ ವಿಮಾನಯಾನ ಆರಂಭಿಸುವುದಾಗಿ ಏರ್ ಇಂಡಿಯಾದ ಎಕ್ಸ್ಪ್ರೆಸ್ ಹೇಳಿತ್ತು.ಆದರೆ, ಕಾರಣಾಂತರಗಳಿಂದ ಸೇವೆ ಪ್ರಾರಂಭವು ವಿಳಂಬಗೊಂಡಿತ್ತು. ಇದೀಗ ವೆಬ್ಸೈಟ್ನಲ್ಲಿ ಬುಕಿಂಗ್ ಆರಂಭಗೊಡಿದ್ದು,ಬಹು ನಿರೀಕ್ಷಿತ ಬೇಡಿಕೆಯೊಂದು ಈಡೇರಿದಂತಾಗಿದೆ.
ಇಲ್ಲಿಂದ ಉಮ್ರಾ ನಿರ್ವಹಿಸಲು ಬೆಂಗಳೂರು, ಕೋಝಿಕ್ಕೋಡ್ ಅಥವಾ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅವಲಂಬಿಸಬೇಕಿತ್ತು. ಇದಲ್ಲದೆ ಅನಿವಾಸಿ ಭಾರತೀಯ ಉದ್ಯಮಿಗಳು, ಸೌದಿಯಲ್ಲಿರುವ ಉದ್ಯೋಗಸ್ಥರು ಹಾಗೂ ಇತರ ಪ್ರಯಾಣಿಕರಿಗೆ ಮಂಗಳೂರು ಜಿದ್ದಾ ನೇರ ಬಹಳ ಪ್ರಯೋಜನಕಾರಿ.