janadhvani

Kannada Online News Paper

ಸಮುದಾಯದ ಅಭಿವೃದ್ಧಿ ಕ್ಷೇತ್ರದಲ್ಲಿ ‘ಕಿಸ್ವಾ’ ದ ಪಾತ್ರ ಶ್ಲಾಘನೀಯ- ದಮ್ಮಾಮ್‌ನಲ್ಲಿ ಖಾಝಿ ಇ.ಕೆ. ಇಬ್ರಾಹೀಂ ಮದನಿ

ದಮ್ಮಾಮ್: ಕೃಷ್ಣಾಪುರ ಇಸ್ಲಾಮಿಕ್ ಸೋಷಿಯಲ್ ವೆಲ್ಫೇರ್ ಅಸೋಸಿಯೇಷನ್ (ಕಿಸ್ವಾ) ದಮ್ಮಾಂನಲ್ಲಿ ಆಯೋಜಿಸಿದ್ದ ಕಿಸ್ವಾ ಫೆಸ್ಟ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಖಾಝಿ ಇ.ಕೆ. ಇಬ್ರಾಹೀಂ ಮದನಿಯವರು, ಸಮುದಾಯದ ಅಭಿವೃದ್ಧಿಗಾಗಿ, ಬಡವರ ಏಳಿಗೆಗಾಗಿ, ತೀರಾ ಹಿಂದುಳಿದ ಬಡ ಕುಟುಂಬದ ಆಸರೆಯಾಗಿ ಕಿಸ್ವಾದ ಪಾತ್ರ ಹಿರಿದಾಗಿದ್ದು ಇನ್ನು ಮುಂದಕ್ಕೂ ತಾವುಗಳೆಲ್ಲರ ಅತ್ಯಮೂಲ್ಯ ಶ್ರಮ ಮುಂದುವರಿಯಲಿ ಹಾಗೂ ಅಲ್ಲಾಹನ ಅನುಗ್ರಹ ಮತ್ತು ಸಂಪ್ರೀತಿ ನಮ್ಮ ಮೇಲಿರಲಿ ಎಂದು ಪ್ರಾರ್ಥಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬದ್ರಿಯಾ ಜುಮ್ಅ ಮಸ್ಜಿದ್ ಜಮಾಅತ್ ಅಧ್ಯಕ್ಷರಾದ ಬಿ. ಮುಮ್ತಾಝ್ ಅಲಿ ಮಾತನಾಡುತ್ತಾ ನಮ್ಮ ಜೀವನ ಶೈಲಿ ಮತ್ತು ಆಹಾರ ಪದ್ದತಿಯ ಕ್ರಮದಿಂದ ಮನುಷ್ಯರು ಹಲವಾರು ರೋಗಗಳ ದಾಸರಾಗುತ್ತಿದ್ದಾರೆ, ಅದರಲ್ಲೂ ಮುಖ್ಯವಾಗಿ ಕಿಡ್ನಿ ವೈಫಲ್ಯದಂತಹ ಮಾರಕ ಕಾಯಿಲೆಗಳಿಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಿಸ್ವ ಸಂಸ್ಥೆಯು ಕಿಡ್ನಿ ಡಯಾಲಿಸಿಸ್ ಕೇಂದ್ರ ತೆರೆಯುವುದರ ಬಗ್ಗೆ ಕಾರ್ಯಪ್ರವರ್ತರಾಗಿರುವುದು, ಸಮುದಾಯದ ಕಿಡ್ನಿ ವೈಫಲ್ಯ ಹೊಂದಿರುವ ಬಡ ರೋಗಿಗಳಿಗೆ ಒಂದು ವರದಾನವಾಗಿದೆ. ಸಮುದಾಯಾದ ಎಲ್ಲರೂ ಕಿಸ್ವದ ಉದಾತ್ತವಾದ ಈ ಸೇವೆಯಲ್ಲಿ ಕೈಜೋಡಿಸಬೇಕೆಂದು ಕರೆಯಿತ್ತರು.

ಸಮಾರಂಭದ ಮುಖ್ಯ ಅತಿಥಿಯಾಗಿ ಸೌದಿ ಅರೇಬಿಯಾದ ಪ್ರತಿಷ್ಠಿತ ಅಲ್ ಮುಝೈನ್ ಕಂಪನಿಯ CEO ಆದ ಝಕರಿಯ್ಯಾ ಜೋಕಟ್ಟೆ ಯವರು ಕಿಸ್ವ ಹಮ್ಮಿಕೊಂಡ ಯೋಜನೆಗಳು ಆದಷ್ಟು ಶೀಘ್ರದಲ್ಲಿ ಲೋಕಾರ್ಪಣೆಗೊಳ್ಳಲಿ , ಇದರ ಸದುಪಯೋಗವನ್ನು ಸಮಾಜದ ಬಡವರು ಪಡೆಯುವಂತಾಗಲಿ ಎಂದು ಹಾರೈಸಿದರು .
ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ ಸೌದಿ ಅರೇಬಿಯಾದ ಪ್ರತಿಷ್ಠಿತ ಎಕ್ಸಪರ್ಟೈಸ್ ಕಂಪನಿಯ ಉಪಾಧ್ಯಕ್ಷರಾದ ಹಾಜಿ ಶೇಕ್ ಕರ್ನಿರೆಯರು ಸಮುದಾಯಲ್ಲಿ ಇಂತಹ ಬಡವರ ಪರ ಕಾಳಜಿ ಇರುವ ಯೋಜನೆಗಳಿಗೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿದರು.

ಕಿಸ್ವ ಇದರ ಅಧ್ಯಕ್ಷರಾದ ಕಬೀರ್ KM ರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು . ಕಿಸ್ವ ಇದರ ಸ್ಥಾಪಕಾಧ್ಯಕ್ಷರಾದ ಹಾಜಿ ಇಸ್ಮಾಯಿಲ್ NGC ಯವರು ಪ್ರಾಸ್ತಾವಿಕವಾಗಿ ಮಾತಾಡಿದರು .
ಮಾಜಿ ಶಾಸಕರಾದ ಬಿ. ಮೊಹಿದಿನ್ ಬಾವ , ತಮೀಮಿ ಲಾ ಫರ್ಮ್ ನ CEO ಅಬ್ದುಲ್ಅಝೀಝ್ , ಅಲ್-ಬದ್ರಿಯಾ ಎಜ್ಯುಕೇಷನಲ್ ಸಮಿತಿ ಅಧ್ಯಕ್ಷರಾದ ಜನಾಬ್ ಅಬೂಬಕ್ಕರ್ NMPT, ಅಲ್ ಮುಝೈನ್ ಕಂಪನಿಯ CEO ಹಾಜಿ ಮುಹಮ್ಮದ್ ಷರೀಫ್ ಬೋಳಾರ್ , ಕೃಷ್ಣಾಪುರ ಡೆವಲಪ್ ಮೆಂಟ್ ಕಮಿಟಿಯ ಅಧ್ಯಕ್ಷರಾದ ಜನಾಬ್ ಷರೀಫ್, ಜನಾಬ್ ಮುಬೀನ್ ಕೃಷ್ಣಾಪುರ ಟೇಬಲ್ ಫೋರ್ , IICC ಇದರ CEO ಜನಾಬ್ ಅನ್ಸಾಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು .

ಮಾಸ್ಟರ್ ಮುಈಝ್ ಕೃಷ್ಣಾಪುರ ಖಿರಾಅತ್ ಪಠಿಸಿದರು . ಜನಾಬ್ ಅಬ್ದುಲ್ ಖಾದಿರ್ ರವರು ಸಭೆಯಲ್ಲಿದ್ದ ಗಣ್ಯರನ್ನು ಹಾಗೂ ಸಭಿಕರನ್ನು ಸ್ವಾಗತಿಸಿದರು. ಕೆ.ಸಿ.ಮುಹಮ್ಮದ್ ಅಲಿ ಕೃಷ್ಣಾಪುರ ಕಾರ್ಯಕ್ರಮ ನಿರೂಪಿಸಿದರು . ಕೊನೆಯಲ್ಲಿ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಜಮಾತ್ ವಂದಿಸಿದರು.

ವರದಿ:
ಇಸ್ಮಾಯೀಲ್ ಕಾಟಿಪಳ್ಳ, ದಮ್ಮಾಂ.

error: Content is protected !! Not allowed copy content from janadhvani.com