ಕೊಚ್ಚಿ: ಕಳಮಶ್ಶೇರಿಯಲ್ಲಿ ನಡೆದ ಸ್ಫೋಟದ ತನಿಖೆಯು ಬಿರುಸಿನಿಂದ ಸಾಗುತ್ತಿರುವಾಗಲೇ ಬಾಂಬ್ ಇಟ್ಟಿದ್ದು ನಾನೇ ಎಂದು ವ್ಯಕ್ತಿಯೊಬ್ಬ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ ಎಂದು ವರದಿಯಾಗಿದೆ.
ಕೊಚ್ಚಿ ಮೂಲದವನೆಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ತ್ರಿಶೂರ್ ಕೊಡಕರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. ಮಧ್ಯಾಹ್ನ ಒಂದೂವರೆ ಗಂಟೆಗೆ ಪೊಲೀಸ್ ಠಾಣೆ ತಲುಪಿದ ಆತನನ್ನು ಪೋಲೀಸರು ಕೂಲಂಕಷವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಆತನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಬಿಡುಗಡೆ ಮಾಡಿಲ್ಲ.
ಕಣ್ಣೂರು ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದ ನೆಲೆಯಲ್ಲಿ ಗುಜರಾತ್ ಮೂಲದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದೆ.ಆತನ ಬಗ್ಗೆ ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲ. ಈತನಿಗೆ ಮಾನಸಿಕ ಸಮಸ್ಯೆ ಇದೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ.
ಸ್ಪೋಟ ನಡೆದ ತಕ್ಷಣವೇ ಸ್ಥಳದಿಂದ ನಿರ್ಗಮಿಸಿದ ನೀಲಿ ಕಾರನ್ನು ಕೇಂದ್ರೀಕೃರಿಸಿಯೂ ತನಿಖೆ ನಡೆಯುತ್ತಿದೆ.
ಕಳಮಶ್ಶೇರಿಯಲ್ಲಿ ಯೆಹೋವನ ಅಧಿವೇಶನ ನಡೆಯುತ್ತಿದ್ದ ಕನ್ವೆನ್ಷನ್ ಸೆಂಟರ್ನಲ್ಲಿ ಬೆಳಗ್ಗೆ 9.45ರ ಸುಮಾರಿಗೆ ಸಂಭವಿಸಿದ ಸ್ಫೋಟದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, 36 ಮಂದಿ ಗಾಯಗೊಂಡಿದ್ದಾರೆ.