ಬಗ್ದಾದ್, ಆ.30: ಇರಾಕ್ ನಲ್ಲಿ ಭುಗಿಲೆದ್ದ ರಾಜಕೀಯ ಬಿಕ್ಕಟ್ಟು ತಾರಕಕ್ಕೇರಿದ್ದು, ರಾಜಧಾನಿ ಬಗ್ದಾದ್ ನ ಅತ್ಯಂತ ಬಿಗಿಭದ್ರತೆಯ ಗ್ರೀನ್ಝೋನ್(ಅಂತರಾಷ್ಟ್ರೀಯ ವಲಯ)ನಲ್ಲಿ ಬೀಡು ಬಿಟ್ಟಿರುವ ಪ್ರಬಲ ಶಿಯಾ ಧರ್ಮಗುರು ಮುಖ್ತದಾ ಅಲ್ – ಸದರ್ ಅವರ ಸಾವಿರಾರು ಬೆಂಬಲಿಗರು ಬಾಗ್ದಾದ್ನಲ್ಲಿನ ಪ್ರಮುಖ ಸರ್ಕಾರಿ ಅರಮನೆ ಹಾಗೂ ಸರ್ಕಾರಿ ಕಟ್ಟಡಗಳಿಗೆ ನುಗ್ಗಿ ದಾಳಿ ನಡೆಸಿದ್ದಾರೆ.
ಈ ವೇಳೆ, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಮತ್ತು ಭದ್ರತಾ ಪಡೆ ಅಶ್ರುವಾಯು ಮತ್ತು ಗಾಳಿಯಲ್ಲಿ ಗುಂಡುಗಳನ್ನು ಹಾರಿಸಿದೆ. ಇದರಿಂದ ಮತ್ತಷ್ಟು ಕೆರಳಿದ ಪ್ರತಿಭಟನಾಕಾರರು ಗುಂಡಿನ ದಾಳಿಗಳನ್ನು ನಡೆಸಿದೆ. ಘಟನೆಯಲ್ಲಿ ಭದ್ರತಾ ಪಡೆಗಳು ಸೇರಿದಂತೆ ಕನಿಷ್ಠ 25 ಮಂದಿ ಮೃತಪಟ್ಟಿದ್ದು, ನೂರಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ನಿನ್ನೆ ಸಂಜೆಯಿಂದ ಆರಂಭಿಸಿದ ಕಾಳಗವು ಈಗಲೂ ಮುದುವರಿದಿದ್ದು, ಗ್ರೀನ್ ಝೋನ್ ಅಕ್ಷರಶಃ ಸಮರ ಭೂಮಿಯಂತಾಗಿದೆ. ಏತನ್ಮಧ್ಯೆ ಹೊರಗಿನಿಂದ ಕನಿಷ್ಠ 10 ಕ್ಕೂ ಹೆಚ್ಚು ಶೆಲ್ ದಾಳಿಗಳು ನಡೆದಿದೆ. ಇರಾಕ್ನಲ್ಲೇ ಅತ್ಯಂತ ಸುರಕ್ಷಿತ ಪ್ರದೇಶ ಎನಿಸಿರುವ ಗ್ರೀನ್ ಝೋನ್ ವಲಯದಲ್ಲಿ ಪಾರ್ಲಿಮೆಂಟ್, ಸರಕಾರಿ ಇಲಾಖೆಗಳು, ಅಮೇರಿಕಾ, ಬ್ರಿಟನ್ ಸಹಿತ ವಿದೇಶಗಳ ರಾಯಭಾರಿ ಕಚೇರಿಗಳು ಕಾರ್ಯಾಚರಿಸುತ್ತಿವೆ.
ಪ್ರತಿಭಟನಾಕಾರರ ಮೇಲೆ ಜೀವಂತ ಗುಂಡುಗಳನ್ನು ಬಳಸದಂತೆ ಭದ್ರತಾ ಪಡೆಗಳಿಗೆ ಇರಾಕಿನ ಪ್ರಧಾನ ಮಂತ್ರಿ ಮುಸ್ತಫಾ ಅಲ್ ಕಾಳಿಮಿ, ಇರಾಕಿನ ಪಡೆಗಳ ಕಮಾಂಡರ್ ಇನ್ ಚೀಫ್ ಆದೇಶಿಸಿದ್ದಾರೆ. ಘರ್ಷಣೆಯಲ್ಲಿ ಸಂಭವಿಸಿದ್ದ ಸಾವುನೋವುಗಳ ಬಗ್ಗೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ದುಷ್ಕರ್ಮಿಗಳನ್ನು ಗುರುತಿಸಿ ಕಾನೂನಿನ ಪ್ರಕಾರ ಶಿಕ್ಷೆಗೊಳಪಡಿಸುವುದೇ ನಮ್ಮ ಗುರಿ ಎಂದು ಪಿಎಂ ಮುಸ್ತಫಾ ಅಲ್ ಕಾಳಿಮಿ ಹೇಳಿದ್ದಾರೆ.
ಶಿಯಾ ಸಂಸದೀಯ ಪಕ್ಷಗಳಲ್ಲಿ ಕಳೆದ ವಾರ ಅಲ್ – ಸದರ್ ಮತ್ತು ಅವರ ಪ್ರತಿಸ್ಪರ್ಧಿಗಳ ನಡುವೆ ರಾಜಕೀಯ ವಿವಾದಗಳು ಉಲ್ಬಣಗೊಂಡಿವೆ. ಜುಲೈ 30 ರಂದು ಅಲ್ – ಸದರ್ ಅವರ ಬೆಂಬಲಿಗರು ಕೇಂದ್ರ ಬಾಗ್ದಾದ್ನಲ್ಲಿರುವ(Green Zone) ಹಸಿರು ವಲಯಕ್ಕೆ ನುಗ್ಗಿದರು. ಸಂಸತ್ತಿನ ವಿಸರ್ಜನೆ ಮತ್ತು ಅವಧಿಪೂರ್ವ ಚುನಾವಣೆಗಳಿಗೆ ಒತ್ತಾಯಿಸಿ ಸಂಸತ್ತಿನ ಕಟ್ಟಡದಲ್ಲಿ ಮತ್ತು ಹೊರಗೆ ಧರಣಿ ನಡೆಸಿದರು.
ಕಳೆದ ತಿಂಗಳುಗಳಲ್ಲಿ ಶಿಯಾ ಪಕ್ಷಗಳ ನಡುವೆ ಮುಂದುವರಿದ ವಿವಾದಗಳು ಹೊಸ ಇರಾಕಿ ಸರ್ಕಾರದ ರಚನೆಗೆ ಅಡ್ಡಿಯಾಗಿವೆ. ಕಳೆದ ಅಕ್ಟೋಬರ್ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅಲ್ ಸದರ್ ಪಕ್ಷ ಸಂವಿಧಾನದ ಅಡಿ 329-ಆಸನಗಳ ಸಂಸತ್ತಿನ ಮೂರನೇ ಎರಡರಷ್ಟು ಬಹುಮತ ಪಡೆದರೂ, ಹೊಸ ಪ್ರಧಾನಿಯನ್ನು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ. ಬಳಿಕ ಮುಸ್ತಫಾ ಅಲ್ ಖಾಳಿಮಿ ಹಂಗಾಮಿ ಪ್ರಧಾನಿಯಾಗಿ ನೇಮಕಗೊಂಡಿದ್ದಾರೆ.
ಮುಖ್ತದ ಅಲ್ ಸದರ್ ಅವರು ನಿನ್ನೆ ರಾಜಕೀಯ ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ, ಬೆಂಬಲಿಗರು ಸರ್ಕಾರೀ ಅರಮನೆ ಹಾಗೂ ಪ್ರಮುಖ ಕಚೇರಿಗಳಿಗೆ ಮುತ್ತಿಗೆ ಹಾಕಿದ್ದು, ಭದ್ರತಾ ಪಡೆ ಮತ್ತು ಹೋರಾಟಗಾರರ ನಡುವಿನ ಕಾಳಗಕ್ಕೆ ಕಾರಣವಾಗಿದೆ.