janadhvani

Kannada Online News Paper

ದೇವಸ್ಥಾನಕ್ಕೆ ಮಾಂಸ ಎಸೆದು, ಕೋಮುಗಲಭೆ- ಪ್ರಮುಖ ಆರೋಪಿ ಚಂಚಲ್ ತ್ರಿಪಾಠಿ ಬಂಧನ

ಒಂದು ಸಮುದಾಯಕ್ಕೆ ಸೇರಿದ ಮನೆ, ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿತ್ತು.

ಕನ್ನೌಜ್: ಕಳೆದ ತಿಂಗಳು ಕೋಮುಗಲಭೆಗೆ ಕಾರಣವಾಗಿದ್ದ ತಾಲ್ಗ್ರಾಮ್ ಪಟ್ಟಣದ ದೇವಸ್ಥಾನದಲ್ಲಿ ಮಾಂಸವನ್ನು ಎಸೆದಿದ್ದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಚಂಚಲ್ ತ್ರಿಪಾಠಿ ಪ್ರಮುಖ ಆರೋಪಿಯಾಗಿದ್ದು ಈತ ಕಟುಕನಾಗಿದ್ದ ಮನ್ಸೂರ್ ಕಸಾಯಿಗೆ 10 ಸಾವಿರ ರೂಪಾಯಿಗಳ ಆಮಿಷ ಒಡ್ಡಿ ಈ ಕೆಲಸ ಮಾಡಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕುನ್ವರ್ ಅನುಪಮ್ ಸಿಂಗ್ ಹೇಳಿದ್ದಾರೆ.

ಚಂಚಲ್ ತ್ರಿಪಾಠಿಗೆ ಆಗಿನ ಎಸ್‌ಎಚ್‌ಒ ಹರಿ ಶ್ಯಾಮ್ ಸಿಂಗ್ ಅವರೊಂದಿಗೆ ಉತ್ತಮ ಸಂಬಂಧ ಇರಲಿಲ್ಲ. ಹೀಗಾಗಿ ಅವರನ್ನು ಹುದ್ದೆಯಿಂದ ತೆಗೆದುಹಾಕಲು ಈ ರೀತಿಯ ಕುಕೃತ್ಯಕ್ಕೆ ಕೈಹಾಕಿದ್ದರು ಎಂದು ತಿಳಿಸಿದ್ದಾರೆ.

ಕಳೆದ ಜುಲೈ 16ರಂದು ದೇವಸ್ಥಾನದಲ್ಲಿ ಮಾಂಸದ ತುಂಡು ಪತ್ತೆಯಾದ ಹಿನ್ನಲೆಯಲ್ಲಿ ಕೋಮುಗಲಭೆ ಸೃಷ್ಟಿಯಾಗಿತ್ತು. ಅಲ್ಲದೆ ಒಂದು ಸಮುದಾಯಕ್ಕೆ ಸೇರಿದ ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರು ಇದುವರೆಗೆ 17 ಮಂದಿಯನ್ನು ಬಂಧಿಸಿದ್ದಾರೆ.

ಮನ್ಸೂರ್ ಕಸಾಯಿಯನ್ನು ಬಂಧಿಸಿದ ನಂತರ, ಘಟನೆಯ ದುರುದ್ದೇಶ ಹೊರಬಂದಿದೆ. ರಾನ್ವಾ ಗ್ರಾಮದ ನಿವಾಸಿ ಚಂಚಲ್ ತ್ರಿಪಾಠಿ ಮಾಂಸದ ತುಂಡುಗಳನ್ನು ದೇವಸ್ಥಾನದಲ್ಲಿ ಇಡುವಂತೆ ಹೇಳಿದ್ದರೂ ಎಂದು ಮನ್ಸೂರ್ ಪೊಲೀಸರಿಗೆ ತಿಳಿಸಿದ್ದಾರೆ.

ಇನ್ನು ಈ ಘಟನೆ ನಂತರ ಅಂದಿನ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಮಿಶ್ರಾ, ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಶ್ರೀವಾಸ್ತವ ಮತ್ತು ತಾಲ್ಗ್ರಾಮ್ ಪೊಲೀಸ್ ಠಾಣೆ ಪ್ರಭಾರಿ ಹರಿ ಶ್ಯಾಮ್ ಸಿಂಗ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿತ್ತು.

error: Content is protected !! Not allowed copy content from janadhvani.com