janadhvani

Kannada Online News Paper

ಮಸೂದ್ ಮತ್ತು ಫಾಝಿಲ್ ಕುಟುಂಬಕ್ಕೆ ಸೆಂಟ್ರಲ್ ಕಮಿಟಿಯಿಂದ ಸಹಾಯಧನ ಹಸ್ತಾಂತರ

ಪ್ರವೀಣ್ ಕುಟುಂಬಸ್ಥರಿಗೆ ಅಸಮಾಧಾನ ಇರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅವರ ಮನೆಗೆ ಭೇಟಿ ನೀಡಿಲ್ಲ.

ಮಂಗಳೂರು (ಆ.11): ಇಂದು ಬೆಳ್ಳಾರೆಯ‌ ಕಳಂಜದಲ್ಲಿರುವ ಮಸೂದ್ ನಿವಾಸಕ್ಕೆ ಹಾಗೂ ಸುರತ್ಕಲ್ ನಲ್ಲಿ ಹತ್ಯೆಯಾದ ಮಂಗಳಪೇಟೆಯ ಫಾಝಿಲ್ ಮನೆಗೆ ಭೇಟಿ ನೀಡಿದ ಮುಸ್ಲಿಂ ಸೆಂಟ್ರಲ್ ಕಮಿಟಿ ನಿಯೋಗವು ಪ್ರತೀ ಕುಟುಂಬಕ್ಕೆ 30 ಲಕ್ಷ ರೂ‌. ಸಹಾಯಧನದ ಚೆಕ್ ಅನ್ನು ವಿತರಿಸಿದೆ.

ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಮಸೂದ್ ಅವರಿಂದ ಪರಿಹಾರ ಚೆಕ್ ವಿತರಣೆಯಾಗಿದ್ದು, ಹಲವು ಮುಸ್ಲಿಂ ‌ಮುಖಂಡರು ಹಾಜರಿದ್ದರು.

ಪ್ರವೀಣ್ ಮನೆಯವರು ಒಪ್ಪಿದರೆ ಅವರಿಗೂ ಪರಿಹಾರ ನೀಡಲು ಸಿದ್ಧ

ಬೆಳ್ಳಾರೆ ಪ್ರವೀಣ್ ಅವರ ಮನೆಗೆ ಭೇಟಿ ನೀಡದ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಮಹಮ್ಮದ್ ಮಸೂದ್ ಅವರು, ಪ್ರವೀಣ್ ಮನೆಗೂ ಭೇಟಿ ನೀಡಿ ಸಾಂತ್ವನ ಹೇಳುವ ಜೊತೆಗೆ 10 ಲಕ್ಷ ರೂಪಾಯಿ ಪರಿಹಾರ ನೀಡುವ ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ ನಮ್ಮ ಭೇಟಿಯ ಕುರಿತು ಕುಟುಂಬಸ್ಥರಿಗೆ ಅಸಮಾಧಾನ ಇರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅವರ ಮನೆಗೆ ಭೇಟಿ ನೀಡಿಲ್ಲ. ಮನೆಯವರು ಭೇಟಿ ನೀಡಲು ಅವಕಾಶ ಮಾಡಿ ಕೊಟ್ಟರೆ ಖಂಡಿತವಾಗಿಯೂ ಭೇಟಿ ನೀಡಿ ಸಾಂತ್ವನದ ಜೊತೆಗೆ ಪರಿಹಾರವನ್ನೂ ವಿತರಿಸಲಾಗುವುದು ಎಂದು ಮಸೂದ್ ಸ್ಪಷ್ಟ ಪಡಿಸಿದರು.

ಫಾಝಿಲ್ ಅವರ ಸಹೋದರ ಏಳನೇ ತರಗತಿಯಲ್ಲಿ ಕಲಿಯುತ್ತಿದ್ದು, ಮನೆಯವರು ಅನುವು ಮಾಡಿಕೊಟ್ಟರೆ ಆತ ಐಪಿಎಸ್ ಕಲಿಯಲು ಬಯಸಿದರೂ ಆತನ ವಿದ್ಯಾಭ್ಯಾಸಕ್ಕೆ ಮುಸ್ಲಿಂ ಸೆಂಟ್ರಲ್ ಕಮಿಟಿ ನೆರವು ನೀಡಲಿದೆ ಎಂದರು.

ಸರಕಾರ ಬೆಳ್ಳಾರೆಯ ಪ್ರವೀಣ್ ಅವರ ಮನೆಗೆ ಮಾತ್ರ ಭೇಟಿ ನೀಡಿ ಪರಿಹಾರ ನೀಡಿ, ಮಸೂದ್ ಮತ್ತು ಫಾಝಿಲ್ ಕುಟುಂಬಕ್ಕೆ ಪರಿಹಾರ ನೀಡಲು ತಾರತಮ್ಯ ಎಸಗಿರುವ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು,ಸರಕಾರ ಪರಿಹಾರ ನೀಡುವುದು ಯಾರ ಹಣದಿಂದ ಎಂದು ಸರಕಾರವನ್ನು ಪ್ರಶ್ನೆ ಮಾಡಿದರು. ಅದು ಪರಿಹಾರ ನೀಡುವುದು ಬಡವರು, ಬೀಡಿ ಕಟ್ಟುವವರ ಹಣ ಎಂದು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸರಕಾರ ಫಾಝಿಲ್ ಮನೆಗೆ ಭೇಟಿ ನೀಡಿ ಪರಿಹಾರ ಧನವನ್ನು ವಿತರಿಸಬೇಕಿತ್ತು. ಆದರೆ, ಇನ್ನೂ ಸರಕಾರ ವಿತರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ಮುಸ್ಲಿಂ ಸೆಂಟ್ರಲ್ ಕಮಿಟಿ ಹೇಳಿದಂತೆ ಮಸೂದ್ ಮತ್ತು ಫಾಝಿಲ್ ಕುಟುಂಬಕ್ಕೆ ತಲಾ 30 ಲಕ್ಷ ರೂಪಾಯಿ ಪರಿಹಾರ ಧನವನ್ನು ವಿತರಿಸಿದೆ ಎಂದರು.

ನಿಯೋಗದಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷರಾದ ಅಲ್ ಹಾಜ್ ಕೆ. ಎಸ್. ಮುಹಮ್ಮದ್ ಮಸೂದ್, ಉಪಾಧ್ಯಕ್ಷರಾದ ಹಾಜಿ ಸಿ. ಮಹಮೂದ್, ಹಾಜಿ ಇಬ್ರಾಹಿಂ ಕೋಡಿಜಾಲ್, ಹಾಜಿ ಬಿ.ಎಂ. ಮುಮ್ರಾಜ್ ಅಲಿ, ಕೆ. ಅಶ್ರಫ್, ಪ್ರಧಾನ ಕಾರ್ಯದರ್ಶಿ ಹಾಜಿ ಹನೀಫ್ ಇದ್ದರು.

ಈ ಸಂದರ್ಭ ಮಂಗಳಪೇಟೆ ಜುಮಾ ಮಸೀದಿಯ ಅಧ್ಯಕ್ಷ ಹಸನಬ್ಬ, ಮಂಗಳಪೇಟೆ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಶಫೀಕ್, ಬದ್ರಿಯಾ ಜುಮಾ ಮಸೀದಿಯ ಖತೀಬ್ ಉಮರ್ ಫಾರೂಕ್ ಸಖಾಫಿ ಮೊದಲಾದವರು ಉಪಸ್ಥಿತರಿದ್ದರು.

ಮಗನ ಹೆಸರಿನಲ್ಲಿ ಟ್ರಸ್ಟ್ ಮಾಡಿ ಸಮಾಜ ಸೇವೆ: ಫಾಝಿಲ್ ತಂದೆ

ಪರಿಹಾರ ಪಡೆದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಕೊಲೆಯಾದ ಫಾಝಿಲ್ ಅವರ ತಂದೆ ಉಮರ್ ಫಾರೂಕ್ ಅವರು, ನನ್ನ ಮಗ ಫಾಝಿಲ್ ರಕ್ತದಾನದಂತಹ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಪರಿಹಾರದಿಂದ ಫಾಝಿಲ್ ನ ಹೆಸರಿನಲ್ಲಿ ಟ್ರಸ್ಟ್ ವೊಂದನ್ನು ತೆರೆಯಲಾಗುವುದು. ಆ ಮೂಲಕ ಫಾಝಿಲ್ ನ ಹೆಸರಿನಲ್ಲಿ ಸಮಾಜ ಸೇವೆ ಮಾಡಲಾಗುವುದು ಎಂದು ನುಡಿದರು.

ಈ ಸಂದರ್ಭ ಪುತ್ತು ಬಾವ, ಸಿಎಂ ಹನೀಫ್, ಅಬ್ದುಲ್ ಮಜೀದ್ ಸಿತಾರ್, ಅಬ್ದುಲ್ ಖಾದರ್ ವಿಟ್ಲ, ರಿಯಾಝುದ್ದೀನ್, ಬಿ. ಎಸ್ ಇಮ್ಮಿಯಾಝ್, ಅಬ್ದುಲ್ ಲತೀಫ್, ಸುರತ್ಕಲ್ ಐಕ್ಯತಾ ವೇದಿಕೆಯ ಅಶ್ರಫ್, ಶರೀಫ್, ಅಬ್ದುಲ್ ಜಲೀಲ್, ಫಾರೂಕ್, ಹನೀಫ್ ಪಾಜೆಪಲ್ಲ, ಹನೀಫ್, ಸ್ಥಳೀಯ ಮಸೀದಿ ಅಧ್ಯಕ್ಷ ಹಸನಬ್ಬ, ಶಮೀರ್ ಕಾಟಿಪಳ್ಳ, ಸರ್ಫರಾಝ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com