ನವದೆಹಲಿ: ಪ್ರವಾದಿ ಮುಹಮ್ಮದರ ಬಗೆಗಿನ ಬಿಜೆಪಿ ನಾಯಕರ ಅವಹೇಳನಕಾರಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಸ್ಲಾಮಿಕ್ ರಾಷ್ಟ್ರಗಳ ಸಹಕಾರ ಒಕ್ಕೂಟ (ಒಐಸಿ)ದ ಟೀಕೆಗಳಿಗೆ ಕೇಂದ್ರ ಸರ್ಕಾರ ಸೋಮವಾರ ತಿರುಗೇಟು ನೀಡಿದೆ.
ಪ್ರವಾದಿ ಮುಹಮ್ಮದರ ವಿರುದ್ಧ ಬಿಜೆಪಿ ನಾಯಕಿ ನೂಪುರ್ ಶರ್ಮಾ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) ಖಂಡಿಸಿತ್ತು.
‘ಇದು, ಭಾರತದಲ್ಲಿ ಇಸ್ಲಾಂ ಧರ್ಮದ ವಿರುದ್ಧ ದ್ವೇಷ ಮತ್ತು ನಿಂದನೆಯನ್ನು ತೀವ್ರಗೊಳಿಸುವ, ಮುಸ್ಲಿಮರ ಆಚರಣೆಗಳ ವಿರುದ್ಧದ ವ್ಯವಸ್ಥಿತ ಕಾರ್ಯತಂತ್ರ’ ಎಂದು ಒಐಸಿ ಹೇಳಿತ್ತು.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ಚಿ ಅವರು ‘ಇಸ್ಲಾಮಿಕ್ ಸಹಕಾರ ಸಂಘಟನೆಯ (ಒಐಸಿ) ಇತ್ತೀಚಿನ ಹೇಳಿಕೆಗೆ ಸಂಬಂಧಿಸಿದ ಮಾಧ್ಯಮದ ವರದಿಗಳನ್ನು ಗಮನಿಸಲಾಗಿದೆ. ಒಐಸಿಯ ಅನಗತ್ಯ ಮತ್ತು ಸಂಕುಚಿತ ಮನೋಭಾವದ ಹೇಳಿಕೆಗಳನ್ನು ಭಾರತ ಸರ್ಕಾರವು ಸ್ಪಷ್ಟವಾಗಿ ತಿರಸ್ಕರಿಸುತ್ತದೆ’ ಎಂದು ಹೇಳಿದ್ದಾರೆ.
ಭಾರತ ಸರ್ಕಾರವು ಎಲ್ಲಾ ಧರ್ಮಗಳ ವಿಚಾರದಲ್ಲಿ ಅಪಾರವಾದ ಗೌರವ ಹೊಂದಿದೆ. ‘ಧಾರ್ಮಿಕ ಮುಖಂಡರನ್ನು ನಿಂದಿಸುವಂಥ ಆಕ್ಷೇಪಾರ್ಹ ಟ್ವೀಟ್‌ಗಳು ಮತ್ತು ಹೇಳಿಕೆಗಳನ್ನು ಕೆಲ ವ್ಯಕ್ತಿಗಳು ನೀಡಿದ್ದಾರೆ. ಅವು ಯಾವುದೇ ರೀತಿಯಲ್ಲೂ ಭಾರತ ಸರ್ಕಾರದ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಸಂಬಂಧಪಟ್ಟ ಸಂಸ್ಥೆ ಅವರ ವಿರುದ್ಧ ಈಗಾಗಲೇ ಕಠಿಣ ಕ್ರಮ ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ಒಐಸಿ ಮತ್ತೊಮ್ಮೆ ಪೂರ್ವಗ್ರಹ ಪೀಡಿತ, ದಾರಿತಪ್ಪಿಸುವ, ಕುಚೇಷ್ಟೆಯ ಹೇಳಿಕೆ ನೀಡಿರುವುದು ವಿಷಾದನೀಯ. ಇದು ಪಟ್ಟಭದ್ರ ಹಿತಾಸಕ್ತಿಗಳ ಕೋರಿಕೆಯ ಮೇರೆಗೆ ನಡೆಯುತ್ತಿರುವ ವಿಭಜಕ ಕಾರ್ಯಸೂಚಿಯನ್ನು ಬಹಿರಂಗಪಡಿಸುತ್ತದೆ. ಒಐಸಿ ತನ್ನ ಕೋಮುವಾದಿ ಧೋರಣೆಯನ್ನು ನಿಲ್ಲಿಸಬೇಕು, ಎಲ್ಲಾ ನಂಬಿಕೆ ಮತ್ತು ಧರ್ಮಗಳಿಗೆ ಗೌರವ ತೋರಿಸಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದಿದ್ದಾರೆ.
ಬಿಜೆಪಿ ರಾಷ್ಟ್ರೀಯ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ದೃಶ್ಯ ಮಾಧ್ಯಮವೊಂದರಲ್ಲಿ ಪ್ರವಾದಿ ಮೊಹಮ್ಮದ್ ಕುರಿತು ನೀಡಿದ್ದಾರೆ ಎನ್ನಲಾದ ಆಕ್ಷೇಪಾರ್ಹ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.
ಹೇಳಿಕೆ ವಿವಾದಕ್ಕೀಡಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿದ್ದ ಬಿಜೆಪಿ, ನೂಪುರ್ ಶರ್ಮಾ ಅವರನ್ನು ಪಕ್ಷದಿಂದ ಅಮಾನತು ಮಾಡಿದೆ. ಜತೆಗೆ, ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ್ದ ದೆಹಲಿ ಬಿಜೆಪಿ ಘಟಕದ ಮಾಧ್ಯಮ ವಿಭಾಗದ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಅವರನ್ನೂ ಪಕ್ಷದಿಂದ ಉಚ್ಚಾಟಿಸಿದೆ.