janadhvani

Kannada Online News Paper

ಇರಾಕ್ ಪ್ರಧಾನಿ ನಿವಾಸದ ಮೇಲೆ ಡ್ರೋನ್ ದಾಳಿ- ಹತ್ಯೆ ಯತ್ನ ವಿಫಲ

‘ನಾನು ನನ್ನ ಜನರ ನಡುವೆ ಕ್ಷೇಮದಿದ್ದೇನೆ. ದೇವರಿಗೆ ಕೃತಜ್ಞತೆಗಳು’ ಎಂದು ಪ್ರಧಾನಿಯು ತಮ್ಮ ವಿರುದ್ಧದ ಹತ್ಯೆ ದಾಳಿ ಯತ್ನ ವಿಫಲವಾದ ಹಿಂದೆಯೇ ಟ್ವೀಟ್‌ ಮಾಡಿದ್ದಾರೆ.

ಬಾಗ್ದಾದ್ : ಇರಾಕ್‌ ಪ್ರಧಾನಿ ಮುಸ್ತಫಾ ಅಲ್‌ ಕಾಧಿಮಿ ಅವರ ಹತ್ಯೆಗೆ ಶಸ್ತ್ರಾಸ್ತ್ರವನ್ನು ಜೋಡಿಸಿದ್ದ ಡ್ರೋನ್‌ ಬಳಸಿ ಭಾನುವಾರ ದಾಳಿ ನಡೆದಿದೆ. ಪ್ರಧಾನಿಯ ನಿವಾಸವನ್ನು ಗುರಿಯಾಗಿಸಿ ಈ ದಾಳಿ ನಡೆದಿದೆ. ‘ಈ ಯತ್ನ ವಿಫಲವಾಗಿದ್ದು, ಪ್ರಧಾನಿ ಸುರಕ್ಷಿತವಾಗಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಗ್ದಾದ್ ನ ಭದ್ರಕೋಟೆ ಎಂದೇ ಕರೆಯಲ್ಪಡುವ, ಸೇನೆಯ ಸರ್ಪಗಾವಲಿನಲ್ಲಿರುವ ಗ್ರೀನ್ ಝೋನ್  ಎಂಬಲ್ಲಿ ನೆಲೆಗೊಂಡ ಪ್ರಧಾನಿ ನಿವಾಸ ಬಳಿಯೇ ಈ ಘಟನೆ ನಡೆದಿದೆ ಎನ್ನುವುದು ತೀವ್ರ ಅಚ್ಚರಿಯ ಸಂಗತಿ.

ಕಳೆದ ತಿಂಗಳು ಸಂಸತ್ತಿಗೆ ನಡೆದಿದ್ದ ಸಾರ್ವತ್ರಿಕ ಚುನಾವಣೆಯ ಫಲಿತಾಂಶವನ್ನು ಒಪ್ಪಿಕೊಳ್ಳಲು ಇರಾನ್‌ ಬೆಂಬಲಿತ ಉಗ್ರರ ಸಂಘಟನೆಯು ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಉದ್ಭವಿಸಿದ್ದ ಅನಿಶ್ಚಿತ ಮತ್ತು ಆತಂಕದ ಸ್ಥಿತಿಯು ಈ ದಾಳಿಯಿಂದ ಇನ್ನಷ್ಟು ಹೆಚ್ಚಿದೆ.

ಇರಾಕ್‌ನ ಇಬ್ಬರು ಅಧಿಕಾರಿಗಳು ಸುದ್ದಿ ಸಂಸ್ಥೆಗೆ ನೀಡಿರುವ ಮಾಹಿತಿಯಂತೆ, ಡ್ರೋನ್‌ ದಾಳಿಯಿಂದಾಗಿ ಪ್ರಧಾನಿ ಮುಸ್ತಫಾ ಅಲ್‌ ಕಾಧಿಮಿ ಅವರ ಏಳು ಮಂದಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಅತ್ಯಂತ ಸುರಕ್ಷಿತ ಹಸಿರು ವಲಯದಲ್ಲಿ ಎರಡು ಶಸ್ತ್ರಸಜ್ಜಿತ ಡ್ರೋನ್‌ಗಳನ್ನು ಬಳಸಿ ದಾಳಿ ನಡೆಸಲಾಗಿತ್ತು.

‘ನಾನು ನನ್ನ ಜನರ ನಡುವೆ ಕ್ಷೇಮದಿದ್ದೇನೆ. ದೇವರಿಗೆ ಕೃತಜ್ಞತೆಗಳು’ ಎಂದು ಪ್ರಧಾನಿಯು ತಮ್ಮ ವಿರುದ್ಧದ ಹತ್ಯೆ ದಾಳಿ ಯತ್ನ ವಿಫಲವಾದ ಹಿಂದೆಯೇ ಟ್ವೀಟ್‌ ಮಾಡಿದ್ದಾರೆ. ಇರಾಕ್‌ನ ಹಿತದೃಷ್ಟಿಯಿಂದ ತಾಳ್ಮೆ ಮತ್ತು ಸ್ಥಿತಪ್ರಜ್ಞತೆಯಿಂದ ಇರಬೇಕು ಎಂದೂ ಜನತೆಗೆ ಮನವಿ ಮಾಡಿದ್ದಾರೆ.

ಬಳಿಕ ಇರಾಕ್‌ನ ಟಿ.ವಿ.ಯಲ್ಲಿ ಮಾತನಾಡಿದ ಅವರು, ‘ಹೇಡಿತನದ ರಾಕೆಟ್ ಮತ್ತು ಡ್ರೋನ್‌ ಅನ್ನು ಬಳಸಿ ದಾಳಿ ನಡೆಸುವುದರಿಂದ ನಾಡು ಮತ್ತು ಭವಿಷ್ಯವನ್ನು ಕಟ್ಟಲಾಗದು’ ಎಂದೂ ಪ್ರತಿಪಾದಿಸಿದರು.ಬಾಗ್ದಾದ್‌ದ ಹಲವು ನಿವಾಸಿಗಳು ದೊಡ್ಡಪ್ರಮಾಣದಲ್ಲಿ ಸ್ಫೋಟ ಮತ್ತು ಅದರ ಹಿಂದೆಯೇ ಗುಂಡಿನ ದಾಳಿ ನಡೆದ ಸದ್ದು ಕೇಳಿಸಿಕೊಂಡಿದ್ದಾರೆ. ವಿದೇಶಿ ರಾಯಭಾರಿಗಳು, ಸರ್ಕಾರಿ ಕಚೇರಿಗಳು ಇರುವ ಹ‌ಸಿರುವಲಯದ ದಿಕ್ಕಿನಿಂದ ಈ ಶಬ್ದ ಕೇಳಿಬಂದಿದೆ.

ಹತ್ಯೆಗೆ ಯತ್ನಿಸಿ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿಯು ಅಗತ್ಯ ಸುರಕ್ಷತಾ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಮಾಧ್ಯಮ ಸಂಸ್ಥೆ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

error: Content is protected !! Not allowed copy content from janadhvani.com