janadhvani

Kannada Online News Paper

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ಹಿಂಸಾಚಾರ- ಪಾಪ್ಯುಲರ್ ಫ್ರಂಟ್ ಖಂಡನೆ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ದಾಳಿಗೆ ಭಾರತದಲ್ಲಿ ಮುಸ್ಲಿಮರ ವಿರುದ್ಧದ ಕಿರುಕುಳವೇ ಕಾರಣ ಎಂಬ ಶೇಖ್ ಹಸೀನಾರ ಹೇಳಿಕೆ ಸ್ವೀಕಾರ್ಹವಲ್ಲ

ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯ ಮತ್ತು ಅವರ ಪ್ರಾರ್ಥನಾ ಸ್ಥಳಗಳ ಮೇಲಿನ ಹಿಂಸಾಚಾರವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್ ಮೆನ್ ಒ.ಎಂ.ಎ ಸಲಾಂ ಖಂಡಿಸಿದ್ದಾರೆ.

ನೆರೆಯ ದೇಶದಲ್ಲಿ ಕೇಳಿ ಬರುತ್ತಿರುವ ಸಾವು ಮತ್ತು ವಿನಾಶದ ಸುದ್ದಿಗಳು ಅತ್ಯಂತ ಆತಂಕಕಾರಿ ಹಾಗೂ ದುರಾದೃಷ್ಟಕರವಾಗಿವೆ. ಕೆಲವು ಅನಧಿಕೃತ ಆರೋಪಗಳ ಆಧಾರದಲ್ಲಿ ಕಾನೂನನ್ನು ಕೈಗೆತ್ತಿಕೊಂಡು ಇತರ ಸಮುದಾಯಗಳಿಗೆ ಸೇರಿದ ಅಮಾಯಕರನ್ನು ಗುರಿಪಡಿಸುವ ವಿಚಾರ ಯಾವುದೇ ನಾಗರಿಕ ಸಮಾಜಕ್ಕೆ ಬೆದರಿಕೆಯಾಗಿದೆ. ಇತರರಿಗೆ ಪಾಠ ಕಲಿಸುವ ನಿಟ್ಟಿನಲ್ಲಿ ಇಂತಹ ಜನರನ್ನು ನಿಯಂತ್ರಿಸಿ ಶಿಕ್ಷೆಗೆ ಗುರಿಪಡಿಸಬೇಕಾಗಿದೆ ಎಂದು ಒ.ಎಂ.ಎ.ಸಲಾಂ ಹೇಳಿದರು.

ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಯಾವುದೇ ಸನ್ನಿವೇಶಗಳಲ್ಲೂ ಉಲ್ಲಂಘಿಸಲು ಸಾಧ್ಯವಿಲ್ಲ ಮತ್ತು ಇದು ಕಾನೂನಿನ ನಿಯಮಗಳೊಂದಿಗೆ ಕ್ರಿಯಾತ್ಮಕ ಸಮಾಜವನ್ನು ನಿರ್ಣಯಿಸಲು ಬಳಸಲಾಗುವ ಮಾನದಂಡವಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ದಾಳಿಗೆ ಭಾರತದಲ್ಲಿ ಮುಸ್ಲಿಮರ ವಿರುದ್ಧದ ಕಿರುಕುಳವೇ ಕಾರಣ ಎಂಬ ಶೇಖ್ ಹಸೀನಾರ ಹೇಳಿಕೆ ಸ್ವೀಕಾರ್ಹವಲ್ಲ. ಅಲ್ಪಸಂಖ್ಯಾತರನ್ನು ದೇಶದ ಸಮಾನ ಪ್ರಜೆಗಳೆಂದು ಹಸೀನಾರವರು ತನ್ನ ಇತ್ತೀಚಿನ ಹೇಳಿಕೆಯಲ್ಲಿ ಒಪ್ಪಿಕೊಂಡಿದ್ದು, ಆಕೆ ಇದನ್ನು ಅನುಷ್ಠಾನದ ಮೂಲಕ ಸಾಬೀತುಪಡಿಸಬೇಕು ಮತ್ತು ದೇಶದ ಹಿಂದೂ ಅಲ್ಪಸಂಖ್ಯಾತರ ಶಾಂತಿ ಮತ್ತು ಸುರಕ್ಷತೆಯನ್ನು ಖಾತರಿಪಡಿಸಬೇಕೆಂದು ಒ.ಎಂ.ಎ. ಸಲಾಂ ಹೇಳಿದರು.