ವಿಶ್ವಸಂಸ್ಥೆ, ಅ 10: – ಅಫ್ಘಾನಿಸ್ತಾನದ ಉತ್ತರ ಕುಂಡುಜ್ ಪ್ರಾಂತ್ಯದ ಶಿಯಾ ಸಮುದಾಯದ ಮಸೀದಿಯೊಂದರ ಮೇಲೆ ಕಳೆದ ಶುಕ್ರವಾರ ನಡೆದ ಭೀಕರ ಬಾಂಬ್ ದಾಳಿಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯು ಎನ್ ಎಸ್ ಸಿ ) ಖಂಡಿಸಿದೆ. ಈ ದಾಳಿಯಲ್ಲಿ ಹಲವು ಮಂದಿ ಮೃತಪಟ್ಟಿದ್ದರು.
ಭಯೋತ್ಪಾದನೆ ಅಂತಾರಾಷ್ಟ್ರೀಯ ಶಾಂತಿ ಹಾಗೂ ಭದ್ರತೆಗೆ ಅತ್ಯಂತ ಗಂಭೀರವಾದ ಬೆದರಿಕೆಯಾಗಿದೆ ಎಂದು ಹೇಳಿರುವ ಭದ್ರತಾ ಮಂಡಳಿ ಸದಸ್ಯರು. ಈ ಖಂಡನೀಯ ಭಯೋತ್ಪಾದಕ ಕೃತ್ಯದ ಸಂಚುಕೋರರು, ಪ್ರಾಯೋಜಕರು ಹಾಗೂ ಹಣಕಾಸು ಪೂರೈಸುವ ವ್ಯಕ್ತಿಗಳು ಹಾಗೂ ಗುಂಪುಗಳನ್ನು ಗುರುತಿಸಿ ನ್ಯಾಯದ ಕಕ್ಷೆಗೆ ಒಳಪಡಿಸಿ ಉಗ್ರವಾಗಿ ಶಿಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದಕ್ಕೂ ಮುನ್ನ ಶನಿವಾರ, ಐರೋಪ್ಯ ಒಕ್ಕೂಟದ ಬಾಹ್ಯ ಕ್ರಿಯಾ ಸೇವೆ (ಇಇಎಎಸ್) ಬಾಂಬ್ ದಾಳಿಯ ಸಂಪೂರ್ಣ ಹೊಣೆಗಾರಿಕೆಯನ್ನು ವಹಿಸಿಕೊಂಡಿರುವ ಭಯೋತ್ಪಾದಕ ಗುಂಪು ಇಸ್ಲಾಮಿಕ್ ಸ್ಟೇಟ್-ಖೊರಾಸನ್ ಗುಂಪನ್ನು ನ್ಯಾಯದ ಕಕ್ಷೆಗೆ ಒಳಪಡಿಸಬೇಕು. ಬದುಕುವ ಹಕ್ಕು, ಜನಾಂಗೀಯ, ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳು ಸೇರಿದಂತೆ ಎಲ್ಲಾ ಅಫ್ಘನ್ ನಾಗರಿಕರ ಹಕ್ಕುಗಳನ್ನು ಗೌರವಿಸಿ ರಕ್ಷಿಸಬೇಕು ಎಂದು ಒತ್ತಿಹೇಳಿದೆ.