ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಿದರು.ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಬಸವರಜ ಬೊಮ್ಮಾಯಿ ಅವರಿಗೆ ಪ್ರಮಾಣ ಬೋಧಿಸಿದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಧಿಕಾರ ಮತ್ತು ಗೌಪ್ಯತೆ ಪ್ರಮಾಣ ವಚನ ಬೋಧಿಸಿದರು.ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು ಕಾರ್ಯಕ್ರಮ ನಡೆಸಿಕೊಟ್ಟರು.
ಬಳಿಕ ನೂತನ ಮುಖ್ಯಮಂತ್ರಿ ಕಡತಕ್ಕೆ ಸಹಿ ಹಾಕಿದರು. ನಂತರ ರಾಜ್ಯಪಾಲ ಗೆಹ್ಲೋಟ್, ಸಿಎಂ ಬೊಮ್ಮಾಯಿ ಅವರಿಗೆ ಹೂಗುಚ್ಚ ನೀಡಿ ಅಭಿನಂದಿಸಿದರು.
ಇದಕ್ಕೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮುಂಜಾನೆ ನಿರ್ಗಮಿತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಬಸವರಾಜ ಬೊಮ್ಮಾಯಿ ಅವರ ಬೆನ್ನು ತಟ್ಟಿ ಶುಭ ಹಾರೈಸಿದರು.
ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಗಣ್ಯರ ದಂಡೇ ಆಗಮಿಸಿತ್ತು.
ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಹಿನ್ನೆಲೆಯಲ್ಲಿ ರಾಜಭವನಕ್ಕೆ ನೂರಾರು ಅಭಿಮಾನಿಗಳು ಆಗಮಿಸಿದ್ದರು. ಪಾಸ್ ಇಲ್ಲದ ಕಾರಣ ಎಲ್ಲರಿಗೂ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿಗದೇ ನಿರಾಸೆಗೊಂಡರು.
ರಾಜಭವನದ ಹೊರಗೆ ಅಭಿಮಾನಿಗಳು ಘೋಷಣೆ ಕೂಗಿದರು.