ಘಾಜಿಯಾಬಾದ್: ಭಾರತದಲ್ಲಿ ಇಸ್ಲಾಮ್ ಧರ್ಮ ಅಪಾಯದಲ್ಲಿದೆ ಎಂದು ಸೃಷ್ಟಿಸಲಾದ ಭಯದ ಬಲೆಗೆ ಮುಸ್ಲಿಮರು ಸಿಲುಕಬಾರದು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರ ಸಂಘಚಾಲಕ ಮೋಹನ್ ಭಾಗವತ್ ಕರೆ ನೀಡಿದ್ದಾರೆ. ನಿನ್ನೆ ಭಾನುವಾರ ಮುಸ್ಲಿಮ್ ರಾಷ್ಟ್ರೀಯ ಮಂಚ್ ಇಲ್ಲಿ ಆಯೋಜಿಸಿದ್ದ’ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಭಾಗವತ್, ಎಲ್ಲಾ ಭಾರತೀಯರದ್ದೂ ಒಂದೇ ಡಿಎನ್ಎ ಆಗಿದ್ದು, ಪೂಜಾಚರಣೆ ವಿಚಾರದಿಂದ ಜನರನ್ನ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಾಗೆಯೇ, ಗೋ ರಕ್ಷಣೆ ಹೆಸರಿನಲ್ಲಿ ಜನರ ಮೇಲೆ ಹಲ್ಲೆ ಮಾಡುವುದನ್ನು ಬಲವಾಗಿ ಆಕ್ಷೇಪಿಸಿದ ಅವರು, ಅಂಥವರು ಹಿಂದುತ್ವದ ವಿರುದ್ಧವಾಗಿದ್ದಾರೆ ಎಂದು ಹೇಳಿದ್ದಾರೆ.
“ಯಾವ ಮುಸ್ಲಿಮನೂ ಭಾರತದಲ್ಲಿ ಇರಬಾರದು ಎಂದು ಹಿಂದೂವೊಬ್ಬ ಹೇಳಿದರೆ ಆತ ಒಬ್ಬ ಹಿಂದೂವೇ ಅಲ್ಲ. ಗೋವು ನಮಗೆ ಪೂಜ್ಯ. ಆದರೆ, ಗೋರಕ್ಷಣೆ ಹೆಸರಿನಲ್ಲಿ ಇತರರ ಮೇಲೆ ಹಲ್ಲೆ ನಡೆಸಿದರೆ ಅದು ಹಿಂದುತ್ವ ವಿರೋಧಿಯಾಗುತ್ತದೆ. ಗೋಹತ್ಯೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನು ಇದೆ” ಎಂದು ಆರೆಸ್ಸೆಸ್ ಮುಖ್ಯಸ್ಥರು ತಿಳಿಸಿದ್ದಾರೆ. ತನ್ನ ಖ್ಯಾತಿ ಹೆಚ್ಚಿಸಿಕೊಳ್ಳಲಾಗಲೀ, ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿಯಾಗಲೀ ತಾನು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ ಎಂದು ತಮ್ಮ ಭಾಷಣದ ಆರಂಭದಲ್ಲೇ ಸ್ಪಷ್ಟಪಡಿಸಿದ ಅವರು, ರಾಷ್ಟ್ರೀಯತೆ ಭಾವನೆಯಲ್ಲಿ ಭಾರತೀಯರಲ್ಲಿ ಒಗ್ಗಟ್ಟು ಮೂಡಬೇಕೆಂದು ಪ್ರತಿಪಾದಿಸಿದ್ದಾರೆ.
ದೇಶದಲ್ಲಿ ಒಗ್ಗಟ್ಟಿನ ಬಲವಿಲ್ಲದೇ ಅಭಿವೃದ್ಧಿ ಸಾಧ್ಯವಿಲ್ಲ. ರಾಷ್ಟ್ರೀಯತೆ ಮತ್ತು ನಮ್ಮ ಪೂರ್ವಿಕರ ವೈಭವವು ನಮ್ಮ ಒಗ್ಗಟ್ಟಿಗೆ ಆಧಾರವಾಗಿರಬೇಕು ಎಂಬ ಅನಿಸಿಕೆ ವ್ಯಕ್ತಪಡಿಸಿದ ಮೋಹನ್ ಭಾಗವತ್, ಹಿಂದೂ ಮತ್ತು ಮುಸ್ಲಿಮರ ನಡುವಿನ ಸಂಘರ್ಷ ಶಮನಕ್ಕೆ ಮಾತುಕತೆಯೇ ಏಕೈಕ ಪರಿಹಾರ ಎಂದಿದ್ದಾರೆ.
“ಹಿಂದೂ ಮತ್ತು ಮುಸ್ಲಿಮ್ ಮಧ್ಯೆ ಒಗ್ಗಟ್ಟು ಮೂಡಬೇಕು ಎನ್ನುವುದು ತಪ್ಪಾಗುತ್ತದೆ. ಯಾಕೆಂದರೆ, ಈ ಎರಡು ಸಮುದಾಯಗಳು ವಿಭಿನ್ನವಲ್ಲ. ಯಾವುದೇ ಧರ್ಮೀಯರನ್ನ ಒಳಗೊಂಡಂತೆ ಎಲ್ಲಾ ಭಾರತೀಯರ ಡಿಎನ್ಎ ಒಂದೇ ಆಗಿದೆ… ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ಇಲ್ಲಿ ಹಿಂದೂ ಅಥವಾ ಮುಸ್ಲಿಮರ ಪ್ರಾಬಲ್ಯ ಎಂದೆನ್ನಲು ಸಾಧ್ಯವಿಲ್ಲ. ಇಲ್ಲಿ ಭಾರತೀಯರ ಪ್ರಾಬಲ್ಯ ಮಾತ್ರವೇ ಇರುವುದು” ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕರು ಅಭಿಪ್ರಾಯಪಟ್ಟಿದ್ದಾರೆ.
ಆರ್ ಎಸ್ ಎಸ್ ಸಂಘಟನೆ ರಾಜಕಾರಣದಲ್ಲೂ ಇಲ್ಲ, ಅಥವಾ ಪ್ರತಿಷ್ಠೆ ಹೆಚ್ಚಿಸಿಕೊಳ್ಳುವ ಉದ್ದೇಶದಲ್ಲೂ ಇಲ್ಲ. ದೇಶದ ಸಬಲತೆಗೆ ಹಾಗೂ ಸಮಾಜದ ಪ್ರತಿಯೊಬ್ಬರ ಏಳ್ಗೆಗೆ ಸಂಘ ಕೆಲಸ ಮಾಡುತ್ತದೆ ಎಂದು ಮೋಹನ್ ಭಾಗ್ವತ್ ಹೇಳಿದ್ದಾರೆ.