ಬೆಂಗಳೂರು,ಜೂ.8: ಜೂ. 14 ಬಳಿಕ ರಾಜ್ಯದಲ್ಲಿ ನಿರ್ಬಂಧವನ್ನು ಸಡಿಲಗೊಳಿಸಿ, ಹಂತ ಹಂತವಾಗಿ ಅನ್ಲಾಕ್ ನಡೆಸುವ ಕುರಿತು ಚಿಂತನೆ ನಡೆಸಲಾಗಿದೆ. ಈಗಾಗಲೇ ಮೂರು ಬಾರಿ ಲಾಕ್ಡೌನ್ ವಿಸ್ತರಿಸಿರುವ ಮುಖ್ಯಮಂತ್ರಿಗಳು ಜೂ 14 ರಬಳಿಕ ಮತ್ತೊಮ್ಮೆ ಲಾಕ್ಡೌನ್ ಹೇರುವ ಸಂಭಾವ್ಯ ಕಡಿಮೆ ಇದೆ. ಇದೇ ಹಿನ್ನಲೆ ಯಾವ ರೀತಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಸೋಂಕು ನಿಯಂತ್ರಿಸಬೇಕು ಎಂಬ ಕುರಿತು ಇನ್ನೆರಡು ದಿನದೊಳಗೆ ಸಿಎಂ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ನಿರ್ಬಂಧಗಳ ತೆರವು ಕುರಿತು ಹಾಗೂ ಕೊರೋನಾ ಸೋಂಕು ಇಳಿಕೆಯ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ಉಪ ಮುಖ್ಯಮಂತ್ರಿ ಸಿಎಸ್ ಅಶ್ವತ್ಥ್ ನಾರಾಯಣ, ರಾಜ್ಯದಲ್ಲಿ ವಿಧಿಸಿರುವ ಲಾಕ್ಡೌನ್ ಜೂನ್ 14ರಂದು ಅಂತ್ಯಗೊಳ್ಳಲಿದೆ. ಈ ಹಿನ್ನಲೆ ಮುಂದಿನ ಕ್ರಮಗಳ ಕುರಿತು ಸಿಎಂ ಇನ್ನೆರಡು ದಿನಗಳಲ್ಲಿ ತೀರ್ಮಾನ ನಡೆಸಿ, ಈ ಕುರಿತು ತಿಳಿಸಲಿದ್ದಾರೆ. ಈ ಸಂಬಂಧ ಸಚಿವರೊಂದಿಗೆ ಚರ್ಚೆ ನಡೆಸಲಿದ್ದು, ಈ ಸಂಬಂಧ ಕೈಗೊಳ್ಳಬಹುದಾದ ಕ್ರಮಗಳ ಕುರಿತು ನಿರ್ಧಾರವಾಗಲಿದೆ ಎಂದರು.
ತಜ್ಞರು, ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ, ಕೆಲವು ಜಿಲ್ಲೆಗಳನ್ನು ಹೊರತುಪಡಿಸಿದರೆ, ಬಹುತೇಕ ಜಿಲ್ಲೆಗಳಲ್ಲಿ ಸೋಂಕು ಗಣನೀಯವಾಗಿ ಇಳಿಕೆ ಕಂಡಿದೆ. ಪ್ರತಿನಿತ್ಯ ದಾಖಲಾಗುವ ಪ್ರಕರಣದಲ್ಲಿ ಏರಿಕೆ ಕಂಡು ಬಂದಿಲ್ಲ. ಈ ಹಿನ್ನಲೆ ಹಂತ ಹಂತ ನಿರ್ಬಂಧ ಸಡಿಲಿಕೆಗೆ ಮುಂದಾಗಲಿದ್ದೇವೆ ಎಂದು ತಿಳಿಸಿದರು
ರಾಜ್ಯದಲ್ಲಿ ಸೋಂಕು ಇಳಿಕೆ ಕಂಡು ಬರುತ್ತಿರುವ ಕುರಿತು ಈ ಹಿಂದೆ ಪ್ರತಿಕ್ರಿಯಿಸಿದ ಸಿಎಂ ಬಿ ಎಸ್ ಯಡಿಯೂರಪ್ಪ, ಶೇ 5ಕ್ಕಿಂತ ಕಡಿಮೆ ಸೋಂಕು ಪ್ರಕರಣ ಕಂಡು ಬಂದ ಜಿಲ್ಲೆಗಳಲ್ಲಿ ಮಾತ್ರ ಅನ್ಲಾಕ್ ಪ್ರಕ್ರಿಯೆ ನಡೆಸಲಾಗುವುದು ಎಂದಿದ್ದರು.
ಪ್ರಸ್ತುತ ಇರುವ ಲಾಕ್ಡೌನ್ನಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಜೂನ್ 14ರ ಬಳಿಕ ಹಂತ ಹಂತವಾಗಿ ಈ ನಿರ್ಬಂಧಗಳು ತೆಗೆಯುವ ಸಾಧ್ಯತೆ ಇದ್ದು, ಯಾವ ರೀತಿ ಕ್ರಮಕೈಗೊಳ್ಳಲಿದ್ದಾರೆ ಎಂಬುದು ಇನ್ನೆರಡು ದಿನದಲ್ಲಿ ಸಿಎಂ ರಾಜ್ಯದ ಜನರಿಗೆ ತಿಳಿಸುವ ಸಾಧ್ಯತೆ ಇದೆ.