ಬೆಂಗಳೂರು, ಮೇ.4: ರಾಜ್ಯದಲ್ಲಿ ಕೊರೋನಾ ಸೋಂಕು ಮೂರು ನಾಲ್ಕು ಪಟ್ಟು ಹೆಚ್ಚಾಗುತ್ತಿದ್ದು, ಪರಿಸ್ಥಿತಿ ನಿಭಾಯಿಸಲು ಉಸ್ತುವಾರಿ ಸಚಿವರು ಆಯಾ ಜಿಲ್ಲೆಯಲ್ಲಿರಬೇಕು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕಟ್ಟಾಜ್ಞೆ ಹೊರಡಿಸಿದ್ದಾರೆ.
ಕೋವಿಡ್ ನಿರ್ವಹಣೆ ಸಂಬಂಧ ನಡೆಸಲಾದ ಸಂಪುಟ ಸಭೆ ಬಳಿಕ ಮಾತನಾಡಿದ ಅವರು, ಚಾಮರಾಜನಗರ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಈಗಾಗಲೇ ತನಿಖೆ ನಡೆಯುತ್ತಿದ್ದು, ಘಟನೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ. ರಾಜ್ಯದಲ್ಲಿ ಕೋವಿಡ್ ಹೆಚ್ಚಳದ ಹಿನ್ನಲೆ ಸಚಿವರೊಂದಿಗೆ ಸವಿಸ್ತಾರವಾಗಿ ಚರ್ಚೆ ಮಾಡಲಾಗಿದೆ. ಆಕ್ಸಿಜನ್ ಬಗ್ಗೆ ರೆಮಿಡಿಸಿವರ್, ಹಾಸಿಗೆ ಸೇರಿದಂತೆ ಕೋವಿಡ್ ನಿರ್ವಹಣೆ ಕುರಿತು ಸಚಿವರಿಗೆ ಜವಾಬ್ದಾರಿ ನೀಡಲಾಗಿದೆ. ನಾಳೆಯೇ ಉಸ್ತುವಾರಿ ಸಚಿವರು ಸ್ಥಳದಲ್ಲಿ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ತಾಕೀತು ಮಾಡಲಾಗಿದೆ ಎಂದರು.
ಕೋವಿಡ್ ವಾರ್ ರೂಂ ಉಸ್ತುವಾರಿಗಳ ನೇಮಕ ಕೂಡ ಮಾಡಲಾಗಿದ್ದು, ಜಗದೀಶ್ ಶೆಟ್ಟರ್ಗೆ ಆಕ್ಸಿಜನ್ ಹಂಚಿಕೆ ಹೊಣೆ ನೀಡಲಾಗಿದೆ. ಮಾನವ ಸಂಪನ್ಮೂಲ, ರೆಮಿಡಿಸಿವಿರ್ ಸೇರಿದಂತೆ ಔಷಧ ಸರಬರಾಜು ಕಂಪನಿ ಗಳ ಜೊತೆಗೆ ಅಶ್ವತ್ಥ್ ನಾರಾಯಣ್ ಸಂಪರ್ಕದಲ್ಲಿ ಇರುತ್ತಾರೆ. ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆ ಬೆಡ್ ವ್ಯವಸ್ಥೆ ಮಾಡುವ ಜವಾಬ್ದಾರಿಯನ್ನು ಇಂಧನ ಸಚಿವ ಆರ್ಅಶೋಕ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿಗೆ ನೀಡಲಾಗಿದೆ. ವಾರ್ ರೂಮ್ ಕಾಲ್ ಸೆಂಟರ್ ನಿರ್ವಹಣೆಯನ್ನು ಅರವಿಂದ್ ಲಿಂಬಾವಳಿಗೆ ವಹಿಸಲಾಗಿದೆ.
ಇನ್ನು ಆರೋಗ್ಯ ಸಚಿವರಾದ ಕೆ ಸುಧಾಕರ್ಗೆ ಯಾವುದೇ ಉಸ್ತುವಾರಿಯನ್ನು ಸಿಎಂ ನೀಡದಿರುವುದು ಗಮನಸೆಳೆದಿದೆ. ಚಾಮರಾಜನಗರ ಘಟನೆ ಹಿನ್ನಲೆ ಆರೋಗ್ಯ ಸಚಿವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನಲೆ ಅವರಿಗೆ ಯಾವುದೇ ವಿಶೇಷ ಜವಾಬ್ದಾರಿಯನ್ನು ನೀಡಿಲ್ಲ.
ಲಾಕ್ಡೌನ್ ಜಾರಿಯಲ್ಲಿದ್ದರೂ ಸೋಂಕು ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆ ಪರ್ಯಾಯ ಕ್ರಮದ ಕುರಿತು ಮಾತನಾಡಿದ ಅವರು, ಮೇ 12ರವರೆಗೆ ಲಾಕ್ಡೌನ್ ಮುಂದುವರೆಯಲಿದ್ದು, ಬಳಿಕ ಮುಂದೇನು ಮಾಡಬೇಕು ಎಂದು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ರಾಜ್ಯದಲ್ಲಿ ಆಕ್ಸಿಜನ್ ಸಮಸ್ಯೆಗೆ ಕಾರಣ ಹೊರ ರಾಜ್ಯದಿಂದ ಆಕ್ಸಿಜನ್ ತಡವಾಗಿ ಬರುತ್ತಿರುವುದಾಗಿದೆ. ಮಹಾರಾಷ್ಟ್ರದಲ್ಲಿ ಸೋಂಕು ಕಡಿಮೆ ಆಗುತ್ತಿದೆ. ಈ ಹಿನ್ನಲೆ ಜಿಂದಾಲ್ ಅವರು ನೀಡುತ್ತಿರುವ ಆಕ್ಸಿಜನ್ ರಾಜ್ಯಕ್ಕೆ ನೀಡಿ ಎಂದು ಕೇಳಿದ್ದೇವೆ. ಈ ಬಗ್ಗೆ ಕೇಂದ್ರದ ಜೊತೆಗೆ ಮಾತಾಡಿದ್ದೇವೆ ಸಹಕಾರ ಕೊಡುವುದಾಗಿ ಹೇಳಿದ್ದಾರೆ ಎಂದರು.
ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರು, ನರ್ಸಿಂಗ್ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಎಲ್ಲಾ ಸಚಿವರು ಸಮರೋಪಾದಿಯಲ್ಲಿ ಕೆಲಸ ಮಾಡುವಂತೆ ತಿಳಿಸಲಾಗಿದೆ. ರೆಮಿಡಿಸಿವರ್ ಔಷಧವನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
ಇದೇ ವೇಳೆ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಫ್ರಂಟ್ ಲೈನ್ ವರ್ಕಸ್ ಎಂದು ಪರಿಗಣಿಸಿ ಅವರಿಗೂ ಲಸಿಕೆಯನ್ನು ನೀಡಲಾಗುವುದು ಎಂದು ತಿಳಿಸಿದರು.