janadhvani

Kannada Online News Paper

ಕೆಸಿ ರೋಡ್: ಪಬ್ಜಿ ವಿಚಾರದಲ್ಲಿ ಬಾಲಕನ ಹತ್ಯೆ- ಜತೆ ಆಟಗಾರನ ಬಂಧನ

ಉಳ್ಳಾಲ: ಇಲ್ಲಿನ ಕೆ.ಸಿ ರೋಡು ಬಳಿ ಬಾಲಕನ ಕೊಲೆಗೆ ಸಂಬಂಧಿಸಿದಂತೆ ಉಳ್ಳಾಲ ಠಾಣಾ ಪೊಲೀಸರು ಆತನ ಪಬ್ಜಿ ಜತೆಗಾರ ದೀಪಕ್‌ (18)ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹಕೀಫ್‌ ಯಾವತ್ತೂ ಪಬ್ ಜಿ ಆಟದಲ್ಲಿ ಗೆಲ್ಲುತ್ತಿದ್ದ. ನೆರೆಮನೆಯ ನಿವಾಸಿ ದೀಪಕ್ ಜತೆಗೂ ಆಟಕ್ಕೆ ಮುಂದಾಗಿದ್ದ. ಆನ್ ಲೈನ್ ಮೂಲಕ ಆಟವಾಡಿದ ಸಂದರ್ಭ ಹಕೀಬ್ ಗೆಲುವು ಸಾಧಿಸಿದಾಗ ಸಂಶಯ ವ್ಯಕ್ತಪಡಿಸಿದ ದೀಪಕ್, ನಿನ್ನ ಆಟ ಬೇರೆ ಯಾರೋ ಆಡುತ್ತಿದ್ದಾರೆ. ಅದಕ್ಕೆ ಎದುರುಬದುರಾಗಿ ಕುಳಿತು ಆಡುವ ಸವಾಲು ಹಾಕಿದ್ದ. ಅದರಂತೆ ಶನಿವಾರ ಸಂಜೆ ಬಳಿಕ ಇಬ್ಬರೂ ಜೊತೆಯಾಗಿ ಆಟವಾಡಲು ಆರಂಭಿಸಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.

ಆಟದಲ್ಲಿ ಹಾಕೀಬ್ ಸೋಲನು ಕಂಡಿದ್ದಾನೆ. ಇದರಿಂದ ದೀಪಕ್- ಹಕೀಫ್‌ ನಡುವೆ ವಾಗ್ವಾದ ನಡೆದಿತ್ತು. ಇದರಿಂದ ಕುಪಿತಗೊಂಡ ಹಕೀಫ್‌ ಸಣ್ಣ ಕಲ್ಲೆಸೆದು ದೀಪಕ್‌ಗೆ ಹಲ್ಲೆ ನಡೆಸಿದ್ದ. ಇದರಿಂದ ರೊಚ್ಚಿಗೆದ್ದ ದೀಪಕ್ ದೊಡ್ಡ ಕಲ್ಲನ್ನು ಹಕೀಫ್‌ ಮೇಲೆ ಹಾಕಿದಾಗ ವಿಪರೀತ ರಕ್ತಸ್ರಾವ ಉಂಟಾಗಿ ಆತ ಸ್ಥಳದಲ್ಲೇ ಕುಸಿದುಬಿದ್ದಿದ್ದ. ಗಾಬರಿಗೊಂಡ ದೀಪಕ್ ಆತನನ್ನು ಸಮೀಪದಲ್ಲೇ ಇದ್ದ ಕಂಪೌಂಡ್ ಪಕ್ಕಕ್ಕೆ ಕರೆದೊಯ್ದು ಬಾಳೆ ಎಲೆ, ತೆಂಗಿನಗರಿಗಳನ್ನು ಮುಚ್ಚಿ ಪರಾರಿಯಾಗಿದ್ದನು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.

ಭಾನುವಾರ ಬೆಳಿಗ್ಗೆ ಸ್ಥಳೀಯರು ಹಕೀಫ್‌ನ ಮೃತದೇಹ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ದೀಪಕ್ ನನ್ನು ವಶಕ್ಕೆ ಪಡೆದುಕೊಂಡಿರುವ ಉಳ್ಳಾಲ ಪೊಲೀಸರು ವಿಚಾರಣೆ ಕೈಗೆತ್ತಿಕೊಂಡಿದ್ದಾರೆ.

ಸ್ಥಳಕ್ಕೆ ಕಮೀಷನರ್ ಭೇಟಿ: ಸ್ಥಳಕ್ಕೆ ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ಭೇಟಿ ನೀಡಿದರು. ಪೋಷಕರು ಮಕ್ಕಳ ಕೈಗೆ ಮೊಬೈಲ್ ನೀಡಿದಾಗ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದರು. ಪಬ್ ಜಿ ಆಟ ಬ್ಯಾನ್ ಆದರೂ ಬೇರೆ ವರ್ಷನ್ ಗಳನ್ನು ಮಕ್ಕಳು ಉಪಯೋಗಿಸುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ಕೆ.ಸಿ ರೋಡ್ ನಿವಾಸಿ ಹನೀಫ್ ಎಂಬವರ ಪುತ್ರ ಹಕೀಫ್‌ (12) ಮೃತ ಬಾಲಕ. ಅವರ ಮನೆಯಿಂದ 3 ಕಿಲೊ ಮೀಟರ್‌ ದೂರದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು.ಶನಿವಾರ ಸಂಜೆಯಿಂದ ನಾಪತ್ತೆಯಾಗಿದ್ದ ಹಕೀಫ್‌ ಕುರಿತು ಹೆತ್ತವರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು‌ ದಾಖಲಿಸಿದ್ದರು.

error: Content is protected !! Not allowed copy content from janadhvani.com