ಬೆಂಗಳೂರು:-ರಾಜ್ಯದಲ್ಲಿ ಕೊವಿಡ್ – 19ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಲಾಕ್ ಡೌನ್ ಹೇರದೆ ಕೆಲವು ಕಠಿಣ ನಿಯಮಗಳನ್ನು ಜಾರಿಗೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇದರಿಂದಾಗಿ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಜಾರಿಯಾಗಬಹುದು ಎಂದು ಆತಂಕಗೊಂಡಿದ್ದ ಜನತೆ ಸದ್ಯಕ್ಕೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣದಲ್ಲಿ ನಿನ್ನೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಬಿಬಿಎಂಪಿ ಹಾಗೂ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಮಹತ್ವದ ಸಭೆ ನಡೆಯಿತು.
ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್, ರಾತ್ರಿ ಕರ್ಪ್ಯೂ ಶಾಲಾ – ಕಾಲೇಜುಗಳಿಗೆ ರಜೆ ಹಾಗೂ ಸಿನಿಮಾ ಮಂದಿರಗಳನ್ನು ತಾತ್ಕಾಲಿಕವಾಗಿ ಮುಚ್ಚುಸಲು ಕ್ರಮ ತೆಗೆದುಕೊಳ್ಳುವ ಅಗತ್ಯತೆಯನ್ನು ಸಲಹಾ ಸಮಿತಿ ಮುಖ್ಯಮಂತ್ರಿಗೆ ಮನವಿ ಮಾಡಿತು.
ಮುಂದಿನ 4ರಿಂದ 8 ವಾರಗಳ ಕಾಲ ಕಠಿಣ ಕ್ರಮ ಕೈಗೊಳ್ಳುವಂತೆ ಕೋವಿಡ್-19 ತಾಂತ್ರಿಕ ಸಲಹಾ ಸಮಿತಿ ಸಲಹೆಯನ್ನು ನೀಡಿತು .ಆದರೆ, ಇದನ್ನು ಒಪ್ಪದ ಯಡಿಯೂರಪ್ಪ ಅವರು, ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಜರುಗಿಸಬಹುದೆ ಹೊರತು, ಲಾಕ್ ಡೌನ್ ಸೇರಿದಂತೆ ಇನ್ನು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು ಎಂದು ಗೊತ್ತಾಗಿದೆ.
ಸಭೆಯ ಬಳಿಕ ಸುದ್ದಿಗೋಷ್ಟಿ ನಡೆಸಿದ ಸಿ.ಎಂ.ಯಡಿಯೂರಪ್ಪ ಅವರು, ರಾತ್ರಿ ಕರ್ಫ್ಯೂ/ವಾರಾಂತ್ಯ ಲಾಕ್ಡೌನ್ ಸೇರಿದಂತೆ ಬೆಂಗಳೂರಿನಲ್ಲಿ ಹಲವಾರು ಕಠಿಣ ಕ್ರಮಗಳು ಜಾರಿ ಮಾಡದಿರಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಸಾರ್ವಜನಿಕರು ಜಾಗೃತರಾಗಿ, ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಪಾಡುವುದು ಮತ್ತು ಇತರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತೇನೆ. ಹೆಚ್ಚಿನ ಸಂಖ್ಯೆಯಲ್ಲಿ ಗುಂಪುಗೂಡುವುದನ್ನು ತಡೆಗಟ್ಟಿ. ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಎಲ್ಲ ಅರ್ಹ ನಾಗರಿಕರೂ ಲಸಿಕೆ ಹಾಕಿಸಿಕೊಳ್ಳಬೇಕು. ಶಿಕ್ಷಕರಿಗೂ ಕೋವಿಡ್ ಲಸಿಕೆ ಹಾಕಿಸಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು.ಇನ್ನು 15 ದಿವಸ ಪ್ರತಿಭಟನೆ, ಧರಣಿಗಳಿಗೆ ಅವಕಾಶವಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕೋವಿಡ್ ನಿರ್ವಹಣೆಗೆ ಅನುದಾನದ ಯಾವುದೇ ಕೊರತೆ ಇಲ್ಲ. ಈಗಾಗಲೇ 150 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅಗತ್ಯ ಬಿದ್ದಲ್ಲಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು. ಬೆಂಗಳೂರಿನಲ್ಲಿ ಕಳೆದ ಫೆಬ್ರವರಿ ತಿಂಗಳಲ್ಲಿ ಪಾಸಿಟಿವಿಟಿ ರೇಟ್ 0.94% ಇದ್ದು ಮಾರ್ಚ್ ತಿಂಗಳಲ್ಲಿ 1.94% ಕ್ಕೆ ಹೆಚ್ಚಿದೆ.ಪ್ರಸ್ತುತ 15,882 ಸಕ್ರಿಯ ಪ್ರಕರಣಗಳು ಇದ್ದು, ಈ ವರೆಗೆ 6.61 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ ಎಂದರು.
ನಿಗದಿತ ಗುರಿಗಿಂತ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಶೇ. 90 ಕ್ಕೂ ಹೆಚ್ಚು ಆರ್‍ಟಿಪಿಸಿಆರ್ ಪರೀಕ್ಷೆಗಳನ್ನೇ ನಡೆಸಲಾಗುತ್ತಿದೆ.ನಗರದಲ್ಲಿ ಹೆಚ್ಚುತ್ತಿರುವ ಪ್ರಕರಣಗಳನ್ನು ನಿರ್ವಹಿಸಲು ಸರ್ಕಾರ, ಬಿಬಿಎಂಪಿ ಎಲ್ಲ ರೀತಿಯಲ್ಲೂ ಸಜ್ಜಾಗಿದ್ದು ಈಗಾಗಲೇ ಹೆಚ್.ಎ.ಎಲ್. ಮತ್ತು ಹಜ್ ಭವನಗಳಲ್ಲಿ ತಲಾ 100 ಹಾಸಿಗೆಗಳ ಕೋವಿಡ್ ಕೇರ್ ಸೆಂಟರುಗಳನ್ನು ತೆರೆಯಲಾಗಿದೆ ಎಂದು ಸಿಎಂ ಮಾಹಿತಿ ನೀಡಿದರು.
ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿಯೂ 250 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಏಪ್ರಿಲ್ 5 ರಿಂದ ಕಾರ್ಯಾರಂಭ ಮಾಡಲು ಸಜ್ಜುಗೊಳಿಸಲಾಗುತ್ತಿದೆ. ಕೋವಿಡ್ ಪರೀಕ್ಷೆ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಪ್ರತಿ ವಾರ್ಡಿನಲ್ಲಿ 2 ಮೊಬೈಲ್ ಮತ್ತು 1 ಸ್ಟಾಟಿಕ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.
ಸಂಪರ್ಕಿತರ ಪತ್ತೆಗೆ ಕಂದಾಯ, ಶಿಕ್ಷಣ ಇಲಾಖೆ ಸಿಬ್ಬಂದಿಯನ್ನೂ ಬಳಸಿಕೊಳ್ಳಲಾಗುತ್ತಿದೆ. ಸಂಪರ್ಕಿತರ ಪತ್ತೆಯ ಗುರಿಯನ್ನು ಸಹ 30ಕ್ಕೆ ಹೆಚ್ಚಿಸಲು ಸೂಚಿಸಲಾಗಿದೆ.ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ 1166 ಬೆಡ್‍ಗಳನ್ನು ಮೀಸಲಿಡಲಾಗಿದ್ದು, ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಹಾಸಿಗೆಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು.
ಖಾಸಗಿ ಆಸ್ಪತ್ರೆಗಳೂ ಸಹಕರಿಸುವಂತೆ ಹಾಗೂ ಕೋವಿಡ್ ಚಿಕಿತ್ಸೆಗೆ ಹಾಸಿಗೆಗಳನ್ನು ಒದಗಿಸಲು ಸಿದ್ಧರಿರುವಂತೆ ತಿಳಿಸಲಾಗಿದೆ ಎಂದು ಸೂಚಿಸಿದರು. ಬಿಬಿಎಂಪಿ ಎಂಟು ವಲಯಗಳಿಗೆ ಹಿರಿಯ ಅಧಿಕಾರಿಗಳನ್ನು ಈಗಾಗಲೇ ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ ಎಂದು
ಹೇಳಿದರು.
ಲಾಕ್ ಡೌನ್, ನೈಟ್ ಕರ್ಫ್ಯೂ ಬಗ್ಗೆ ಬೇಕಾಬಿಟ್ಟಿ ಯಾರು ಹೇಳಿಕೆ ಕೊಡುವ ಹಾಗಿಲ್ಲ ಎಂದು ಸಚಿವರು ಮತ್ತು ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ ನೀಡಿದ್ದಾರೆ. ಲಾಕ್‌ಡೌನ್, ಕರ್ಫ್ಯೂ, ಕಂಟೈನ್ಮೆಂಟ್ ವಲಯಗಳ ಬಗ್ಗೆ ಆಯಾ ಕಾಲಕ್ಕೆ ತಕ್ಕಂತೆ ಕೇಂದ್ರ ಗೃಹ ಸಚಿವಾಲಯ ಮಾತ್ರ ಆದೇಶ ಹೊರಡಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಮುಂದೆ ಕೋವಿಡ್‌ಗೆ ಸಂಬಂಧಿಸಿದಂತೆ ಯಾವ ಮಂತ್ರಿಯೂ ತಮಗೆ ತೋಚಿದಂತೆ ಹೇಳಿಕೆ ನೀಡುವುದನ್ನು ನಿರ್ಬಂಧಿಸಲಾಗಿದೆ. ಕೋವಿಡ್ ಕುರಿತಾಗಿ ಲಾಕ್ಡೌನ್, ಕಂಟೇನ್ಮೆಂಟ್, ನಿರ್ಬಂಧಗಳ ಬಗೆಗೆ ಮುಖ್ಯಮಂತ್ರಿ ಅನುಮೋದನೆಯ ನಂತರವಷ್ಟೇ ಸಚಿವರು ಬಾಯಿ ತೆರೆಯಬೇಕು ಎಂದು ಆದೇಶ ಹೊರಡಿಸಲಾಗಿದೆ.ಕೊರೊನಾ ನಿಯಮಾವಳಿ ಕುರಿತು ಕೇಂದ್ರದ ಮಾದರಿಯಲ್ಲೇ ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಆದೇಶಗಳನ್ನು ಹೊರಡಿಸಲಿದೆ.
ಆದರೆ ಇತ್ತೀಚಿಗೆ ಕೆಲವು ಆದೇಶಗಳನ್ನ ಇತರೆ ಇಲಾಖೆಗಳು ಹೊರಡಿಸಿರೋದು ಗಮನಕ್ಕೆ ಬಂದ ಹಿನ್ನೆಲೆ ಕೋವಿಡ್‌ಗೆ ಸಂಬಂಧಿಸಿದ ಯಾವುದೇ ಸೂಚನೆಗಳನ್ನ ಮತ್ತು ನಿರ್ದೇಶನಗಳನ್ನ ರಾಜ್ಯ ವಿಪತ್ತು ನಿರ್ವಹಣಾ ಕಾರ್ಯ ಸಮಿತಿಯ ಮುಖ್ಯಸ್ಥರೇ ಹೊರಡಸಬೇಕು, ಅದು ಮುಖ್ಯಮಂತ್ರಿಗಳ ಅನುಮೋದನೆ ಪಡೆದ ಬಳಿಕವೇ ಮುಖ್ಯಕಾರ್ಯದರ್ಶಿಗಳು ಆದೇಶ ಹೊರಡಿಸತಕ್ಕದ್ದು ಎಂದು ಸಿಎಂ ಕಚೇರಿಯಿಂದ ಆದೇಶ ಹೊರಬಿದ್ದಿದೆ.
ಕೋವಿಡ್‌ಗೆ ಸಂಬಂಧಿಸಿದಂತೆ ಅಧಿಕಾರಿಗಳು ಮತ್ತು ಸಚಿವರುಗಳು ಕೇವಲ ವಿವರಣೆ ನೀಡಬಹುದು. ಬದಲಾಗಿ ಯಾವುದೇ ಸಚಿವರಾಗಲಿ ಅಥವಾ ಅಧಿಕಾರಿಗಳಾಗಲಿ ನಿರ್ಬಂಧ ಹೇರುವ ಬಗ್ಗೆ ಹೇಳಿಕೆಗಳನ್ನ ನೀಡಬಾರದು. ಮುಖ್ಯ ಕಾಯ9ದಶಿ9 ಅದೇಶದ ಆಧಾರದ ಮೇಲೆ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಸಂಬಂಧಿಸಿದ ಇಲಾಖೆಗಳು ಎಸ್ಒಪಿಗಳನ್ನ ಹೊರಡಿಸಬೇಕು ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಶಾಲೆ ಆರಂಭ ಸೇರಿದಂತೆ, ಕೊರೊನಾ ನಿಯಮ ಜಾರಿಗೆ ತರುವ ವಿಚಾರದಲ್ಲಿ ಇಲಾಖೆಗಳ ನಡುವೆ ಸಮನ್ವಯತೆ ಕೊರತೆ ಎದುರಾಗಿದ್ದು, ಸಚಿವರುಗಳು ಗೊಂದಲ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಶಿಕ್ಷಣ ಸಚಿವರು ಹಾಗೂ ವೈದ್ಯಕೀಯ ಸಚಿವರ ನಡುವೆ ಗೊಂದಲ ಏರ್ಪಟ್ಟಿದ್ದರಿಂದ ಕೊರೊನಾ ಸಂಬಂಧ ಯಾರು ಪ್ರಕಟಣೆಗಳನ್ನು ಹೊರಡಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಕಳೆದ 15 ದಿನಗಳಿಂದ ರಾಜ್ಯದಲ್ಲಿ ನಿರಂತರವಾಗಿ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಕಠಿಣ ನಿಯಮ ಜಾರಿ ಸರಕಾರಕ್ಕೆ ಅನಿವಾರ್‍ಯ ಎಂಬ ಪರಿಸ್ಥಿತಿ ತಂಡೊಡ್ಡಿತ್ತು. ಸಭೆಯಲ್ಲಿ ಸಚಿವರಾದ ಆರ್ ಅಶೋಕ್, ಡಾ.ಕೆ.ಸುಧಾಕರ್, ಸುರೇಶ್ ಕುಮಾರ್, ಕೆ,ಗೋಪಾಲಯ್ಯ, ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವೀಂದ್ರ ಹಾಗೂ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಸೇರಿದಂತೆ ಮತ್ತತರರು ಭಾಗವಹಿಸಿದ್ದರು.