ಕೈರೋ :ದಕ್ಷಿಣ ಈಜಿಪ್ಟ್ನಲ್ಲಿ ಶುಕ್ರವಾರ ಎರಡು ರೈಲುಗಳು ಮುಖಾಮುಖಿ ಡಿಕ್ಕಿಯಾಗಿದ್ದು, ಈ ಭೀಕರ ಅವಘಡದಲ್ಲಿ ಕನಿಷ್ಠ 32 ಮಂದಿ ಪ್ರಯಾಣಿಕರು ಬಲಿಯಾಗಿದ್ದಾರೆ. 66 ಮಂದಿ ಗಾಯಗೊಂಡಿದ್ದಾರೆ. ಭೀಕರ ಅವಘಡ ಸಂಬಂಧ ಪ್ರತಿಕ್ರಿಯೆ ನೀಡಿರುವ ಅಲ್ಲಿನ ಆರೋಗ್ಯ ಸಚಿವರು ಇದು ದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಅತಿದೊಡ್ಡ ಮಾರಕ ಅಪಘಾತ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ರಾಜಧಾನಿ ಕೈರೋದಿಂದ 460 ಕಿ.ಮೀ. ದೂರದಲ್ಲಿರುವ ತಹ್ತಾ ಜಿಲ್ಲೆಯ ಸೋಹಾಗ್ ಪ್ರಾಂತ್ಯದಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು, 12 ಹೆಚ್ಚು ಆ್ಯಂಬುಲೆನ್ಸ್ಗಳು ಸ್ಥಳಕ್ಕೆ ಆಗಮಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುತ್ತಿವೆ. ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.
ರೈಲು ಅಪಘಾತದಲ್ಲಿ 32 ಮಂದಿ ಬಲಿಯಾಗಿದ್ದಾರೆ. 66 ಜನರ ಪ್ರಯಾಣಿಕರು ಗಾಯಗೊಂಡಿದ್ದು, ಅವರೆಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ. ಎರಡು ರೈಲುಗಳು ಮುಖಾಮುಖಿಯಾಗಿ ಗುದ್ದಿದ ರಭಸಕ್ಕೆ ಎರಡು ರೈಲಿನ ಹಲವು ಬೋಗಿಗಳು ಸಂಪೂರ್ಣ ಜಖಂಗೊಂಡಿವೆ.
ಕಳೆದ ವರ್ಷ ಮಾರ್ಚ್‌ನಲ್ಲಿ ಈಜಿಪ್ಟ್ ರಾಜಧಾನಿ ಕೈರೋದಲ್ಲಿ ಎರಡು ಪ್ಯಾಸೆಂಜರ್ ರೈಲುಗಳು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 13 ಜನರು ಗಾಯಗೊಂಡಿದ್ದರು. ಈ ಅಪಘಾತದ ನಂತರ ದೇಶಾದ್ಯಂತ ರೈಲು ಸೇವೆಗಳನ್ನು ಸಂಕ್ಷಿಪ್ತವಾಗಿ ಸ್ಥಗಿತಗೊಳಿಸಲಾಗಿತ್ತು. ಕೆಟ್ಟ ಹವಾಮಾನದ ಕಾರಣದಿಂದ ಸಂಕೇತಗಳು ಕಾರ್ಯನಿರ್ವಹಿಸದ ಕಾರಣ ರೈಲು ಅಪಘಾತಕ್ಕೆ ಕಾರಣ ಎಂದು ರೈಲು ವ್ಯವಸ್ಥಾಪಕರು ಹೇಳಿದ್ದರು. ಮತ್ತು ಫೆಬ್ರವರಿ 2019 ರಲ್ಲಿ, ಕೈರೋ ಮುಖ್ಯ ರೈಲು ನಿಲ್ದಾಣದಲ್ಲಿ ರೈಲು ಹಳಿ ತಪ್ಪಿ 20 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಈ ಅವಘಡದಿಂದಾಗಿ ಸಾರಿಗೆ ಸಚಿವರು ರಾಜೀನಾಮೆ ನೀಡಿದ್ದರು