janadhvani

Kannada Online News Paper

ಮುಖ್ಯಮಂತ್ರಿ ಮೇಲೆ ಹಲ್ಲೆ- ತೀವ್ರ ಖಂಡನೆ

ನಂದಿಗ್ರಾಮ: ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂದು ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಕೆಗೆ ತೆರಳಿದ್ದ ಸಂದರ್ಭದಲ್ಲಿ ಕೆಲವರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸಿಎಂ ಮಮತಾ ಬ್ಯಾನರ್ಜಿಯ ಸುತ್ತ ಪೊಲೀಸ್ ಬಂದೋಬಸ್ತ್ ಇಲ್ಲದ ಸಮಯದಲ್ಲಿ ನಾಲ್ಕು ಅಥವಾ ಐದು ಜನರಿಂದ ಅವರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಈ ಹಲ್ಲೆಯಿಂದ ಅವರ ಕಾಲಿನ ಭಾಗಕ್ಕೆ ತೀವ್ರ ಗಾಯಗಳಾಗಿದ್ದು, ಅವರನ್ನು ಮತ್ತೆ ಕೋಲ್ಕತ್ತಾಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲದೆ, ಈ ಘಟನೆಯನ್ನು ಟಿಎಂಸಿ ಪಕ್ಷ ಉಗ್ರವಾಗಿ ಖಂಡಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಭಾರತೀಯ ಚುನಾವಣಾ ಆಯೋಗ ವರದಿ ಕೇಳಿದೆ.

ಈ ಘಟನೆ ಸಂಬಂಧ ಸ್ವತಃ ಮಾಧ್ಯಮದವರೊಂದಿಗೆ ಮಾತನಾಡಿರುವ ಸಿಎಂ ಮಮತಾ ಬ್ಯಾನರ್ಜಿ, “ನಾಮಪತ್ರ ಸಲ್ಲಿಸಿ ನಾನು ಮರಳಿ ಕಾರಿಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ನಾಲ್ಕರಿಂದ ಐದು ಜನ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಈ ಹಲ್ಲೆಯಿಂದ ನನ್ನ ಕಾಲಿನ ಭಾಗ ಊದಿಕೊಂಡಿದೆ. ಖಂಡಿತ ಇದು ಯೋಜಿತ ದಾಳಿಯಾಗಿದ್ದು, ಪೊಲೀಸರು ಇಲ್ಲದಿದ್ದಾಗ ನನ್ನ ಮೇಲೆ ದಾಳಿ ನಡೆಸಲು ಪಿತೂರಿ ಮಾಡಿದ್ದಾರೆ” ಎಂದು ತಿಳಿಸಿದ್ದಾರೆ.

ಇಂದು ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಸಿದ ನಂತರ ಮಮತಾ ಬ್ಯಾನರ್ಜಿ ರಾತ್ರಿ ಅಲ್ಲಿಯೇ ಉಳಿದುಕೊಳ್ಳಲು ನಿರ್ಧರಿಸಿದ್ದರು. ಆದರೆ, ಅಚಾನಕ್ಕಾಗಿ ನಡೆದ ಈ ಘಟನೆಯಿಂದಾಗಿ ಅವರನ್ನು ಇದೀಗ 130 ಕಿ.ಮೀ ದೂರದ ಕೋಲ್ಕತ್ತಾಗೆ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಕರೆದುಕೊಂಡು ಹೋಗಲಾಗಿದೆ.

ಹಿಂಸಾಚಾರದ ಆತಂಕದ ನಡುವೆ ಚುನಾವಣಾ ಆಯೋಗವು ಬಂಗಾಳ ಪೊಲೀಸ್ ಮಹಾನಿರ್ದೇಶಕ ವೀರೇಂದರ್ ಅವರನ್ನು ಬದಲಿಸಿದ ಒಂದು ದಿನದ ನಂತರ ಈ ದಾಳಿ ನಡೆದಿದೆ. 1987 ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಪಿ.ನಿರಜ್ನಾಯನ್ ಅವರನ್ನು ಹೊಸ ಪೊಲೀಸ್ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಮುಖ್ಯಮಂತ್ರಿ ಮೇಲಿನ ದಾಳಿಯ ಬಗ್ಗೆ ಇದೀಗ ಚುನಾವಣಾ ಆಯೋಗ ಪಶ್ಚಿಮ ಬಂಗಾಳ ಪೊಲೀಸ್ ಮಹಾ ನಿರ್ದೇಶಕರಿಂದ ವರದಿ ಕೇಳಿದೆ.

ಈ ತಿಂಗಳ ಅಂತ್ಯದ ವೇಳೆಗೆ ಪ್ರಾರಂಭವಾಗುವ ಪಶ್ಚಿಮ ಬಂಗಾಳದ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ನಂದಿಗ್ರಾಮ್ ಅತಿದೊಡ್ಡ ಯುದ್ಧದ ತಾಣವಾಗಲಿದೆ. ಇದೇ ಕ್ಷೇತ್ರದಲ್ಲಿ ಬಲವಾದ ಹಿಡಿತ ಹೊಂದಿದ್ದ ಮಮತಾ ಅವರ ಆಪ್ತ ಸೆವೆಂದು ಅಧಿಕಾರಿ ಇದೀಗ ಬಿಜೆಪಿ ಸೇರ್ಪಡೆಯಾಗಿದ್ದು, ದೀದಿಗೆ ಸವಾಲು ಎಸೆದಿದ್ದಾರೆ. ಹೀಗಾಗಿ ಇಲ್ಲಿನ ಗೆಲುವು ಮಮತಾ ಬ್ಯಾನರ್ಜಿ ಅವರಿಗೆ ಪ್ರತಿಷ್ಠೆಯ ವಿಚಾರವಾಗಿದ್ದರೆ, ಬಿಜೆಪಿಗೂ ಅಳಿವು ಉಳಿವಿನ ಪ್ರಶ್ನೆಯಾಗಿದೆ.

ಇದೇ ಕ್ಷೇತ್ರದಲ್ಲೇ ಮಮತಾ ಬ್ಯಾನರ್ಜಿ ಕೃಷಿಭೂಮಿ ಸ್ವಾಧೀನದ ವಿರುದ್ಧದ ಜನ ಆಂದೋಲನ ರೂಪಿಸಿ ಆ ಮೂಲಕ ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಏರಿದ್ದರು. ಈ ಜನ ಆಂದೋಲನದಲ್ಲಿ ಸುವೆಂದು ಅಧಿಕಾರಿ ಸಹ ಪ್ರಮುಖ ಪಾತ್ರ ವಹಿಸಿದ್ದರು.

error: Content is protected !! Not allowed copy content from janadhvani.com