ಲಕ್ನೋ, ಜನವರಿ 8: ಪಾಪದ ಡಾಲ್ಫಿನ್ ಒಂದನ್ನು ಜನರ ಗುಂಪೊಂದು ದೊಣ್ಣೆ ಮತ್ತು ರಾಡುಗಳಿಂದ ನಿಷ್ಕರುಣೆಯಿಂದ ಹೊಡೆದು ಕೊಲ್ಲುವ ಹೃದಯ ಹಿಂಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹರಿದಾಡಿದ ಬಳಿಕ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದಾರೆ.
ಈ ಘಟನೆಯು ಡಿಸೆಂಬರ್ 31ರಂದು ನಡೆದಿದ್ದು, ದಾಳಿಕೋರರಲ್ಲಿ ಮೂವರನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಪ್ರತಾಪಗಡದ ಪೊಲೀಸರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಗಂಗಾನದಿಯಲ್ಲಿ ಇರುವ ಡಾಲ್ಫಿನ್‌ಗಳು ಅಳಿವಿನಂಚಿನಲ್ಲಿರುವುದರಿಂದ ಅವುಗಳನ್ನು ಸಂರಕ್ಷಿತ ತಳಿಗಳೆಂದು ಘೋಷಿಸಲಾಗಿದೆ. ಆದರೆ ದುಷ್ಕರ್ಮಿಗಳು ಅಪರೂಪದ ಡಾಲ್ಫಿನ್ ಅನ್ನು ಹೊಡೆದು ಸಾಯಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಅತ್ಯಂತ ಕ್ರೌರ್ಯ ಮೆರೆದಿರುವ ಜನರ ಗುಂಪು, ಡಾಲ್ಫಿನ್ ದೇಹದಿಂದ ರಕ್ತ ಚಿಮ್ಮುತ್ತಿದ್ದರೂ ಸತತವಾಗಿ ಹೊಡೆಯುತ್ತಾ ವಿಕೃತ ಸಂಭ್ರಮಪಟ್ಟಿದ್ದಾರೆ. ಕೆಲವು ವ್ಯಕ್ತಿಗಳು ಡಾಲ್ಫಿನ್ ಅನ್ನು ಹಿಡಿದುಕೊಂಡಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಕಾರಣವಿಲ್ಲದೆ ಸುಖಾಸುಮ್ಮನೆ ಅದಕ್ಕೆ ಹೊಡೆಯುತ್ತಿದ್ದೀರಿ ಎಂದು ಯಾರೋ ಒಬ್ಬರು ಹೇಳುವುದು ವಿಡಿಯೋದಲ್ಲಿ ದಾಖಲಾಗಿದೆ. ಆದರೆ ಆ ಕ್ರೂರಿಗಳು ಅವರ ಆಕ್ಷೇಪಕ್ಕೆ ಕಿವಿಗೊಡದೆ ತಮ್ಮ ದಾಳಿ ಮುಂದುವರಿಸಿದ್ದಾರೆ. ಮುಂದೆ ಓದಿ.
ಕೊಡಲಿಯಿಂದ ಕೊಚ್ಚಿದ ಪಾಪಿ
ಡಾಲ್ಫಿನ್ ರಕ್ತ ಕಾರುತ್ತಿದ್ದಂತೆಯೇ ದುಷ್ಕರ್ಮಿಯೊಬ್ಬ ಕೊಡಲಿಯಿಂದ ಅದರ ಮೇಲೆ ಮತ್ತೆ ಹಲ್ಲೆ ಮಾಡಿದ್ದಾನೆ. ಡಾಲ್ಫಿನ್‌ನ ಚರ್ಮದ ಒಳಗೆ ಆಯುಧವನ್ನು ತೂರಿದ್ದಾನೆ. ವಿಡಿಯೋದ ಕೊನೆಯಲ್ಲಿ ಡಾಲ್ಫಿನ್ ಹೊಡೆತದಿಂದ ಉಂಟಾದ ಗಾಯಗಳಿಂದ ರಕ್ತಸ್ರಾವ ಉಂಟಾಗಿ ನಿರ್ಜೀವವಾಗಿ ಬಿದ್ದಿರುವುದು ಕಾಣಿಸುತ್ತದೆ.
ಮಾಹಿತಿ ನೀಡದ ಸ್ಥಳೀಯರು
ಡಾಲ್ಫಿನ್ ಸತ್ತು ಬಿದ್ದಿದೆ ಎನ್ನುವುದು ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅರಣ್ಯಾಧಿಕಾರಿಗಳಿಗೆ ಕಾಲುವೆ ಒಂದರ ಸಮೀಪ ಜೀವ ಕಳೆದುಕೊಂಡು ಬಿದ್ದಿದ್ದ ಡಾಲ್ಫಿನ್ ದೊರೆತಿದೆ. ನೂರಾರು ಗ್ರಾಮಸ್ಥರು ಅದರ ಸುತ್ತಲೂ ನಿಂತು ನೋಡುತ್ತಿದ್ದರೂ, ಆ ಡಾಲ್ಫಿನ್ ಹೇಗೆ ಸತ್ತಿತು ಎಂಬ ಬಗ್ಗೆ ಮಾಹಿತಿ ನೀಡಲು ಯಾರೊಬ್ಬರೂ ಸಿದ್ಧರಿರಲಿಲ್ಲ. ಡಾಲ್ಫಿನ್ ದೇಹವನ್ನು ಸೂಕ್ಷ್ಮವಾಗಿ ಪರೀಕ್ಷಿಸಿದಾಗ ಕೊಡಲಿ ಗಾಯ ಸೇರಿದಂತೆ ವಿವಿಧ ಆಯುಧಗಳ ಪೆಟ್ಟು ಕಂಡುಬಂದಿದೆ.
ಹೀಗಾಗಿ ಅರಣ್ಯಾಧಿಕಾರಿಗಳ ದೂರಿನ ಮೇರೆಗೆ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಆದರೆ ದಾಳಿಯ ವಿಡಿಯೋವನ್ನು ಯಾರೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರಿಂದ ಅದು ಏಕಾಏಕಿ ವೈರಲ್ ಆಗಿದೆ. ವಿಡಿಯೋದಲ್ಲಿದ್ದ ಕೆಲವರನ್ನು ಸ್ಥಳೀಯರು ಗುರುತಿಸಿದ್ದರು. ಅದರ ಆಧಾರದಲ್ಲಿ ಮೂವರನ್ನು ಬಂಧಿಸಲಾಗಿದೆ.
ಸಮಾಜಕ್ಕೆ ಅಪಾಯಕಾರಿ
‘ಈ ಕೃತ್ಯದಿಂದ ಈ ಜನರು ಪಡೆದುಕೊಳ್ಳುತ್ತಿರುವ ವಿಕೃತ ಆನಂದ ಆಘಾತಕಾರಿ. ಅವರಿಗೆ ಮಾನಸಿಕ ಚಿಕಿತ್ಸೆಯ ಅಗತ್ಯವಿದೆ, ಇಂತಹ ಜನರು ಸಮಾಜಕ್ಕೆ ಅಪಾಯಕಾರಿ. ಇಂದು ಡಾಲ್ಫಿನ್, ನಾಳೆ ಮನುಷ್ಯನನ್ನೇ ಬಲಿ ತೆಗೆದುಕೊಳ್ಳುತ್ತಾರೆ’ ಎಂದು ಸಿನಿಮಾ ನಿರ್ದೇಶಕಿ ಪೂಜಾ ಭಟ್ ವಿಡಿಯೋ ಹಂಚಿಕೊಂಡು ಪ್ರತಿಕ್ರಿಯೆ ನೀಡಿದ್ದಾರೆ.