janadhvani

Kannada Online News Paper

ದಿನದ 24 ಗಂಟೆಯೂ ವ್ಯಾಪಾರ ಕೇಂದ್ರ ತೆರೆದಿಡಲು ರಾಜ್ಯ ಸರ್ಕಾರ ಅನುಮೋದನೆ

ಬೆಂಗಳೂರು: ಇನ್ನು ಮುಂದೆ ರಾಜ್ಯದಲ್ಲಿ ದಿನದ 24 ಗಂಟೆಯೂ ವ್ಯಾಪಾರ ಮಳಿಗೆಗಳನ್ನು ತೆರೆದಿಡಲು ಅವಕಾಶ ದೊರೆಯಲಿದೆ.ಕೊರೊನಾಘಾತದಿಂದಾಗಿ ತತ್ತರಿಸಿರುವ ಆರ್ಥಿಕತೆಗೆ ಪುನಃಶ್ಚೇತನ ನೀಡುವ ಉದ್ದೇಶದಿಂದ ರಾಜ್ಯ ಸರಕಾರವು ದಿನದ 24 ತಾಸು ಅಂಗಡಿ ಮತ್ತು ಮುಂಗಟ್ಟು, ಸೂಪರ್‌ ಮಾರುಕಟ್ಟೆ, ಹೋಟೆಲ್‌ ತೆರೆಯಲು ಅವಕಾಶ ನೀಡಿ ಆದೇಶ ಹೊರಡಿಸಿದೆ.

ಇದರಿಂದ ರಾಜ್ಯದಲ್ಲಿ ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗೆ ಮತ್ತಷ್ಟು ಪ್ರೋತ್ಸಾಹ ಸಿಗುವ ಜೊತೆಗೆ ಹೆಚ್ಚಿನ ಉದ್ಯೋಗವಕಾಶಗಳು ಸೃಷ್ಟಿಯಾಗಲಿವೆ. ಜತೆಗೆ ಜನರು ದಿನದ ಯಾವುದೇ ಹೊತ್ತಿನಲ್ಲಿ ಶಾಪಿಂಗ್‌ ಮಾಡಲು ಅವಕಾಶ ದೊರೆಯಲಿದೆ.
ದಿನದ 24 ಗಂಟೆಗಳೂ ವಾಣಿಜ್ಯ ಚಟುವಟಿಕೆಗೆ ಅವಕಾಶ ನೀಡುವ ಪ್ರಸ್ತಾವ ಹಲವು ವರ್ಷಗಳಿಂದ ಇತ್ತು, ಆದರೆ ನಾನಾ ಕಾರಣಗಳಿಂದಾಗಿ ಸರಕಾರ ಆ ಕುರಿತು ಅಂತಿಮ ನಿರ್ಧಾರ ಕೈಗೊಂಡಿರಲಿಲ್ಲ.

ಕೊರೊನಾದಿಂದ ಆರ್ಥಿಕ ಸಂಕಷ್ಟ ಎದುರಾಗಿರುವ ಹಿನ್ನೆಲೆಯಲ್ಲಿ ಮತ್ತು ವೇಗವಾಗಿ ಪ್ರಗತಿ ಹೊಂದುತ್ತಿರುವ ರಾಜ್ಯಗಳಲ್ಲಿ ಒಂದಾದ ಕರ್ನಾಟಕದಲ್ಲಿ, ವಾಣಿಜ್ಯ ಚಟುವಟಿಕೆಗಳನ್ನು ಉತ್ತೇಜಿಸಲು ಸರಕಾರ ಈ ತೀರ್ಮಾನವನ್ನು ಕೈಗೊಂಡಿದೆ. ಬೆಂಗಳೂರು ಮಹಾನಗರ ಸೇರಿದಂತೆ ನಗರ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆ ಬೆಳವಣಿಗೆಗೆ ಹೆಚ್ಚಿನ ಅವಕಾಶ ಸಿಗಲಿದೆ.

ಯಾವುದಕ್ಕೆಲ್ಲಾ ಅನ್ವಯ?
ಎಲ್ಲ ಬಗೆಯ ಅಂಗಡಿ ಮುಂಗಟ್ಟು, ಮಾಲ್‌, ಸೂಪರ್‌ ಮಾರ್ಕೆಟ್‌, ಹೋಟೆಲ್‌, ರೆಸ್ಟೋರೆಂಟ್‌
(ಮದ್ಯ ಮಾರಾಟ ಮಳಿಗೆ, ಸಿನಿಮಾ ಮಂದಿರಗಳನ್ನು ಹೊರತುಪಡಿಸಿ)

ಷರತ್ತುಗಳು:

  • 24×7 ಕಾರ್ಯಾಚರಣೆಗೆ ಅನುಕೂಲವಾಗುವಂತೆ ಸಿಬ್ಬಂದಿ ನೇಮಕ ಮಾಡಬೇಕು.
  • ಎಲ್ಲ ಕಾರ್ಮಿಕರಿಗೆ ಸರಿಯಾಗಿ ವಾರದ ರಜೆ ಸಿಗುವಂತೆ ಹೆಚ್ಚುವರಿ ಸಿಬ್ಬಂದಿ ಇರಬೇಕು.
  • ಉದ್ಯೋಗಿಗಳ ಎಲ್ಲವಿವರಗಳನ್ನು ಮಳಿಗೆ/ ವಾಣಿಜ್ಯ ಸಂಸ್ಥೆಗಳಲ್ಲಿ ಪ್ರದರ್ಶಿಸಬೇಕು.
  • ಯಾವೆಲ್ಲ ಉದ್ಯೋಗಿ ಆ ದಿನ ದಿನ ರಜೆಯಲ್ಲಿದ್ದಾರೆ ಎಂಬ ವಿವರ ಪ್ರದರ್ಶಿಸಬೇಕು.
  • ಉದ್ಯೋಗಿಯ ಕೆಲಸದ ಅವಧಿ ದಿನಕ್ಕೆ 8 ಗಂಟೆ/ ವಾರದಲ್ಲಿ 48 ಗಂಟೆ ಮೀರಬಾರದು.
  • ಒಟಿ ಸೇರಿದಂತೆ ಕರ್ತವ್ಯದ ಅವಧಿ ದಿನದ 10 ಗಂಟೆ, ವಾರದಲ್ಲಿ 50 ಗಂಟೆ ಮೀರಬಾರದು.

error: Content is protected !! Not allowed copy content from janadhvani.com