ಬಳ್ಳಾರಿ, ಡಿ.15: ಸಾರ್ವಜನಿಕರ ಬೇಡಿಕೆ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಎಂಬ ನೂತನ ಜಿಲ್ಲೆ ರಚಿಸಲು ಸರ್ಕಾರ ನಿನ್ನೆ (ಸೋಮವಾರ) ಅಧಿಕೃತ ಅಧಿಸೂಚನೆ ಹೊರಡಿಸಿದೆ.
ವಿಜಯನಗರ ಜಿಲ್ಲೆ ವ್ಯಾಪ್ತಿಗೆ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು, ಹೂವಿನಹಡಗಲಿ ಮತ್ತು ಹರಪನಹಳ್ಳಿ ತಾಲೂಕುಗಳನ್ನು ಸೇರಿಸಲಾಗಿದೆ.
ಕುರುಗೋಡು, ಸಿರುಗುಪ್ಪ, ಕಂಪ್ಲಿ, ಸಂಡೂರು ಹಾಗೂ ಬಳ್ಳಾರಿ ತಾಲೂಕುಗಳನ್ನು ಬಳ್ಳಾರಿ ಜಿಲ್ಲೆ ವ್ಯಾಪ್ತಿಗೆ ತರಲಾಗಿದೆ. ಬಳ್ಳಾರಿಯು ಬಳ್ಳಾರಿ ಜಿಲ್ಲಾ ಕೇಂದ್ರವಾಗಿರಲಿದ್ದು, ಹೊಸಪೇಟೆ ನೂತನ ವಿಜಯನಗರ ಜಿಲ್ಲಾ ಕೇಂದ್ರ ಆಗಲಿದೆ.
ಆಕ್ಷೇಪ ಸಲ್ಲಿಕೆಗೆ ಕಾಲಾವಕಾಶ
ಹೊಸ ಜಿಲ್ಲಾ ರಚನೆಗೆ ಆಕ್ಷೇಪ ಅಥವಾ ಸಲಹೆ ನೀಡಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಆಕ್ಷೇಪ ಮತ್ತು ಸಲಹೆಗಳನ್ನು ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಲು ತಿಳಿಸಲಾಗಿದೆ. ಸರ್ಕಾರ ಅಧಿಸೂಚನೆ ಹೊರಡಿಸಿದ ದಿನದಿಂದ ಒಂದು ತಿಂಗಳವರೆಗೆ ಈ ಅವಕಾಶ ಇರಲಿದೆ.