janadhvani

Kannada Online News Paper

ವಿರೋಧ ಪಕ್ಷಗಳ ಗದ್ದಲದ ನಡುವೆ ಗೋ ಹತ್ಯೆ ನಿಷೇಧ ಮಸೂದೆ ಮಂಡನೆ

ಬೆಂಗಳೂರು, ಡಿ. 9: ಗೋ ಹತ್ಯೆ ನಿಷೇಧ ಮಸೂದೆಯನ್ನು ವಿಧಾನಸಭೆಯಲ್ಲಿ ಪಶು ಸಚಿವ ಪ್ರಭು ಚೌಹಣ್ ಇಂದು ಮಂಡಿಸಿದರು. ವಿರೋಧ ಪಕ್ಷಗಳ ಗದ್ದಲದ ನಡುವೆಯೇ ಪಶು ಸಚಿವ ಪ್ರಭು ಚೌಹಣ್ಗೆ ವಿಧಾನಸಭಾ ಮಸೂದೆ ಮಂಡಿಸಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವಕಾಶ ನೀಡಿದರು. ಏಕಾಏಕಿ ಮಸೂದೆ ಮಂಡನೆಗೆ ಅವಕಾಶ ನೀಡಿದ ಕ್ರಮಕ್ಕೆ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೇ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಘೋಷಣೆ ಕೂಗಿದರು. ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಗೋ ಹತ್ಯೆ ನಿಷೇಧ ಕಾನೂನು ತರಬಾರದು ಎಂದು ಹೇಳಿದ್ದೇವು. ಇದಕ್ಕೆ ಸರ್ಕಾರ ಕೂಡ ಒಪ್ಪಿಗೆ ಸೂಚಿಸಿತ್ತು. ಆದರೆ ಈಗ ಹೇಳದೇ, ಕೇಳದೇ ಮಸೂದೆ ಮಂಡನೆಗೆ ಮುಂದಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

2020 ನೇ ಸಾಲಿನ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕವನ್ನು ಸಚಿವ ಪ್ರಭು ಚೌಹ್ಹಾಣ್ ಮಂಡಿಸಿದರು. ಕಾಂಗ್ರೆಸ್, ಜೆಡಿಎಸ್ ಸದಸ್ಯರ ಗದ್ದಲದ ನಡುವೆಯೇ ವಿಧೇಯಕಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ವಿಪಕ್ಷಗಳ ಗದ್ದಲ ಹೆಚ್ಚಳವಾದ ಹಿನ್ನಲೆ ಸದನವನ್ನು 10 ನಿಮಿಷ ಮುಂದೂಡಲಾಯಿತು.

ಗೋಹತ್ಯೆ ತಡೆ ಮಸೂದೆಯಲ್ಲೇನಿದೆ?

  • ಹಸು, ಕರು, ದನ, ಎಮ್ಮೆಗಳ ಹತ್ಯೆ ನಿಷೇಧ
  • ಗೋಹತ್ಯೆ, ಗೋ ಸಾಗಣೆ ಪೂರ್ಣ ನಿರ್ಬಂಧ
  • ಗೋಹತ್ಯೆಗೆ 50,000ದಿಂದ 5 ಲಕ್ಷವರೆಗೆ ದಂಡ
  • ಗೋಹತ್ಯೆಗೆ 3ರಿಂದ 7 ವರ್ಷವರೆಗೆ ಜೈಲು ಶಿಕ್ಷೆ
  • ಇದೇ ಕೇಸಲ್ಲಿ 2ನೇ ಸಲ ಸಿಕ್ಕಿಬಿದ್ದರೆ 10 ಲಕ್ಷ ದಂಡ
  • 13 ವರ್ಷ ಮೇಲ್ಪಟ್ಟ ಎಮ್ಮೆಗಳ ಹತ್ಯೆಗೆ ಸಮ್ಮತಿ
  • ಗುಜರಾತ್, ಉತ್ತರ ಪ್ರದೇಶ ಮಾದರಿಯಲ್ಲಿ ಕಾಯಿದೆ ಮಾಡಿರುವ ಸರ್ಕಾರ.
  • ಕೃಷಿ ಹಾಗೂ ಪಶುಸಂಗೋಪನೆ ಉದ್ದೇಶಕ್ಕಾಗಿ ಗೋಸಾಟಕ್ಕೆ ಅಧಿಕಾರಿಗಳ ಅನುಮತಿ ಅಗತ್ಯ
  • ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಸಾಗಾಟ ಮಾಡಬೇಕು
  • ನಿಯಮ ಉಲ್ಲಂಘನೆ ಮಾಡಿದರೆ ಮೂರು ವರ್ಷದಿಂದ ಐದು ವರ್ಷದ ವರೆಗೆ ಜೈಲು ಶಿಕ್ಷೆ ಹಾಗೂ ಐವತ್ತು ಸಾವಿರ ದಂಡ
  • ಎಸ್ ಐ ಶ್ರೇಣಿ ಹಾಗೂ ಅದಕ್ಕಿಂತ ಮೇಲ್ಪಟ್ಟ ಅಧಿಕಾರಿಗಳು ತಪಾಸಣೆ ಹಾಗೂ ಮುಟ್ಟುಗೋಲು ಮಾಡಲು ಕಾಯ್ದೆಯಲ್ಲಿ ಅಧಿಕಾರ
  • ಮುಟ್ಟುಗೋಲು ಹಾಕಿದ ಕೂಡಲೇ ಸಂಬಂಧಿತ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಗೆ ವರದಿ ಮಾಡಬೇಕು.
  • ಗೋಹತ್ಯೆಗೆ ಸಂಬಂಧಿಸಿದಂತೆ ಸಾಗಾಟ ಮಾಡಿದ ವಾಹನಗಳು ಹಾಗೂ ಇತರ ಸಲಕರಣೆಗಳನ್ನು ಆರೋಪಿಗೆ ಹಿಂದುರಿಗಿಸಲು ಬ್ಯಾಂಕ್ ಗ್ಯಾರಂಟಿ ನೀಡಬೇಕು.
  • ಗೋಹತ್ಯೆ ಪ್ರಕರಣಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ರಚನೆಗೆ ಅಧಿಕಾರ

ಕಾಯ್ದೆಯಿಂದ ವಿನಾಯಿತಿ

  1. ಸಂಶೋಧನಾ ಉದ್ದೇಶಕ್ಕಾಗಿ ಬಳಸುವ ಗೋವುಗಳಿಗೆ ವಿನಾಯಿತಿ
  2. ಪಶು ವೈಧ್ಯಾಧಿಕಾರಿ ದೃಢೀಕರಿಸಿದ ಗೋ ಹತ್ಯೆ ಮಾಡಲು ಅವಕಾಶ
  3. ಯಾವುದೇ ರೋಗಗಳಿಂದ ಬಳಲುತ್ತಿರುವ ಗೋವುಳ ಹತ್ಯೆಗೆ ಅವಕಾಶ

error: Content is protected !! Not allowed copy content from janadhvani.com