ಚೆನ್ನೈ, ನ.9:ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಇಂದು ತಮಿಳುನಾಡಿನ ಚೆನ್ನೈನಲ್ಲಿ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದಾರೆ. ಈ ಬಗ್ಗೆ ಸೆಂಥಿಲ್ ಅವರೇ ನಿನ್ನೆ ಟ್ವಿಟರ್ ಮೂಲಕ ಘೋಷಿಸಿದ್ದರು. ರಾಜಕೀಯ ಪಕ್ಷಗಳನ್ನು ಸೇರುತ್ತಿರುವ ಅಧಿಕಾರಿಗಳ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ. ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಇತ್ತೀಚೆಗೆ ಬಿಜೆಪಿ ಸೇರಿದ್ದರು.
ವಿಶೇಷ ಎಂದರೆ ಅಣ್ಣಾಮಲೈ ಅವರ ರೀತಿ ಸಸಿಕಾಂತ್ ಸೆಂಥಿಲ್ ಕೂಡ ರಾಷ್ಟ್ರೀಯ ಪಕ್ಷಗಳಿಗೆ ಮಾನ್ಯತೆ ಇಲ್ಲದ ತಮಿಳುನಾಡಿನ ರಾಜಕಾರಣದ ಮೇಲೆ ಆಸಕ್ತಿ ಹೊಂದಿದ್ದಾರೆ. ತಮಿಳುನಾಡಿನಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ಸಸಿಕಾಂತ್ ಸೆಂಥಿಲ್ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಖಾಡಕ್ಕಿಳಿಯುವ ಸಾಧ್ಯತೆಗಳು ಕೂಡ ಇವೆ.
ದಕ್ಷ ಅಧಿಕಾರಿ, ಸೂಕ್ಷ್ಮ ಸಂವೇದನೆಗಳನ್ನೊಳಗೊಂಡ ಅಧಿಕಾರಿ ಎಂಬ ಕಾರಣಕ್ಕಾಗಿ ಸಸಿಕಾಂತ್ ಸೆಂಥಿಲ್ ಜಿಲ್ಲಾಧಿಕಾರಿಯಾಗಿ ಬಹಳ ಹೆಸರುವಾಸಿಯಾಗಿದ್ದರು. ಕಳೆದ ವರ್ಷ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದಾಗ ದಿಢೀರನೆ ತಮ್ಮ ಉದ್ಯೋಗಕ್ಕೆ ರಾಜೀನಾಮೆ ಕೊಟ್ಟು ಸಾಮಾಜಿಕ ಹೋರಾಟಗಳಿಗೆ ಧುಮುಕಿದ್ದರು. ಎನ್ ಆರ್ ಸಿ ಮತ್ತು ಸಿಎಎಗಳನ್ನು ವಿರೋಧಿಸಿ ದೇಶದ ವಿವಿಧ ಭಾಗಗಳಲ್ಲಿ ನಡೆದ ಪ್ರತಿಭಟನೆ, ವಿಚಾರ ಸಂಕಿರಣ, ಸಭೆ, ಸಮಾರಂಭಗಳಲ್ಲಿ ಭಾಗವಹಿಸಿದ್ದರು. ಐಎಎಸ್ ಅಧಿಕಾರಿಯಾಗಿದ್ದುಕೊಂಡು ಸರ್ಕಾರದ ನಡೆಗಳ ವಿರುದ್ಧ ಹೋರಾಡಲು ಸಾಧ್ಯವಿಲ್ಲ ಎಂಬ ಕಾರಣದಿಂದಾಗಿ ಹುದ್ದೆಗೆ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದ ಸಸಿಕಾಂತ್ ಸೆಂಥಿಲ್ ಈಗ ’ಹೋರಾಟವನ್ನು ಮುಂದುವರೆಸುವ ದೃಷ್ಟಿಯಿಂದ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಲು ನಿರ್ಧರಿಸಿದ್ದೇನೆ’ ಎಂದು ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.
ರಾಜಕಾರಣ ಪ್ರವೇಶಿಸುವ ಸಂದರ್ಭದಲ್ಲಿ ಟ್ವೀಟ್ ಮೂಲಕ ಹಲವು ಸಂಗತಿಗಳನ್ನು ಹಂಚಿಕೊಂಡಿರುವ ಸಸಿಕಾಂತ್ ಸೆಂಥಿಲ್, ‘ಎಲ್ಲಿದ್ದರೂ ನನ್ನ ಜೀವನದುದ್ದಕ್ಕೂ ನಿರ್ಲಕ್ಷ್ಯಕ್ಕೆ ಒಳಗಾದವರಿಗೆ ಧ್ವನಿಯಾಗಲು ಪ್ರಯತ್ನಿಸುತ್ತಿರುವ ಕಾರ್ಯಕರ್ತನಾಗಿದ್ದೇನೆ ಮತ್ತು ನನ್ನ ಕೊನೆಯ ಉಸಿರಿರುವವರೆಗೂ ಅದೇ ರೀತಿ ಮುಂದುವರಿಯುತ್ತೇನೆ’ ಎಂಬ ವಾಗ್ದಾನ ನೀಡಿದ್ದಾರೆ.
41 ವರ್ಷದ 2009ರ ಕರ್ನಾಟಕ-ಕೇಡರ್ ಐಎಎಸ್ ಅಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಕಳೆದ ವರ್ಷದ ಸೆಪ್ಟೆಂಬರ್ 6 ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ತಮಿಳುನಾಡಿನ ಎಐಸಿಸಿ ಉಸ್ತುವಾರಿ ಮತ್ತು ಕರ್ನಾಟಕ ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ 41 ವರ್ಷದ ಕರ್ನಾಟಕ-ಕೇಡರ್ ಐಎಎಸ್ ಅಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಲಾಗಿದೆ.